ಇಂಡಿ : ಅಪರಾಧ ನಿಯಂತ್ರಿಸಲು ಪೊಲೀಸ್ ಇಲಾಖೆ ಹೊಸದಾರಿ ಕಂಡುಕೊಂಡಿದೆ.
ಎಂಸಿಸಿಟಿಎನ್‌ಎಸ್ ಮೊಬೈಲ್ ಕ್ರೈಂ ಆ್ಯಂಡ್ ಕ್ರಿಮಿನಲ್ ಆ್ಯಂಡ್ ಟ್ರಾೃಕ್ಟಿಂಗ್ ಸಿಸ್ಟಮ್ ಆಪ್ ಮೂಲಕ ಅನುಮಾನಾಸ್ಪದ ವ್ಯಕ್ತಿ ಪತ್ತೆ ಹಚ್ಚಬಹುದಾಗಿದೆ.
ಪಟ್ಟಣದ ಮತ್ತು ಗ್ರಾಮೀಣ ಪ್ರದೇಶದಲ್ಲಿ ರಾತ್ರಿ 11 ರ ನಂತರ ಕಳ್ಳತನ ಮತ್ತು ಅಪರಾಧ ಪ್ರಕರಣ ಸಂಖ್ಯೆ ತಡೆಗಟ್ಟಲು ಈ ಆಪ್ ಸಹಕಾರಿಯಾಗಲಿದೆ.
ಈ ಆಪ್‌ನಲ್ಲಿ ಕೇವಲ ಫಿಂಗರ್ ಪ್ರಿಂಟ್‌ನಿಂದ ವ್ಯಕ್ತಿಯ ಅಪರಾಧದ ಪೂರ್ವಾಪರ ತಿಳಿಯುತ್ತದೆ. ಇದರಿಂದ ಮುಂದಾಗುವ ಅಪರಾಧಗಳಿಗೆ ಕಡಿವಾಣ ಹಾಕಬಹುದಾಗಿದೆ.
ರಾತ್ರಿ 11ರ ನಂತರ ಮಾರುಕಟ್ಟೆ ಸೇರಿ ಎಲ್ಲೆಡೆ ಅಂಗಡಿ ಮುಗ್ಗಟ್ಟು ಮುಚ್ಚಲಾಗುತ್ತಿದೆ. ನಂತರ ಅಲ್ಲಲ್ಲಿ ಜನರ ಓಡಾಟ ಕಂಡು ಬರುತ್ತಿದೆ. ಕೆಲವು ಬಾರಿ ಸಾಮಾನ್ಯರಂತೆ ಅಪರಾಧಿಗಳು ರಾತ್ರಿ ಓಡಾಡುವ ಮೂಲಕ ಮುಂದಿನ ಅಪರಾಧ ಕೃತ್ಯಗಳ ಕುರಿತು ಉಪಾಯ ಹುಡಕುತ್ತಾರೆ. ಈ ವೇಳೆ ಯಾರು ಜನಸಾಮಾನ್ಯರು ಅಥವಾ ಯಾರು ಅಪರಾಧ ಹಿನ್ನೆಲೆಯುವಳ್ಳವರೆಂಬುದು ತಿಳಿಯುವುದಿಲ್ಲ. ಇಂತಹ ವೇಳೆ ಈ ಆಪ್ ಪೂರ್ಣ ರೂಪದಲ್ಲಿ ಸಹಕಾರಕ್ಕೆ ಬರಲಿದೆ.
ರಾತ್ರಿ ಬೀಟ್‌ನಲ್ಲಿರುವ ಪೊಲೀಸ್ ಸಿಬ್ಬಂದಿ ಬಳಿ ಫಿಂಗರ್ ಪ್ರಿಂಟ್ ಸ್ಕಾೃನ್ ಇರುವ ಡಿವೈಸ್ ಇರುತ್ತದೆ. ಇದನ್ನು ಇಂಟರ್‌ನೆಟ್‌ಗೆ ಜೋಡಿಸಿ ಕೇಂದ್ರ ಸರ್ಕಾರ ಅಪರಾಧಿ ಡಿಜಿಟಲ್ ದಾಖಲೆಗಳ ಜತೆ ಜೋಡಿಸಲಾಗುತ್ತಿದೆ. ಯಾವುದೇ ವ್ಯಕ್ತಿಯ ಫಿಂಗರ್ ಪ್ರಿಂಟ್ ಸ್ಕಾೃನ್ ಮಾಡುತ್ತಲೇ ತಮ್ಮಲ್ಲಿನ ಡಿಜಿಟಲ್ ದಾಖಲೆಗಳಲ್ಲಿನ ಫಿಂಗರ್ ಪ್ರಿಂಟ್ ಜತೆಗೆ ಮ್ಯಾಚ್ ಮಾಡುತ್ತ ಹೋಗುತ್ತದೆ. ಇಲ್ಲಿ ಸಾಮಾನ್ಯ ವ್ಯಕ್ತಿಯೊ ಅಥವಾ ಹಿಂದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೋ ಎಂಬುದು ತಿಳಿಯಲಿದೆ.
ನಗರದಲ್ಲಿ ರಾತ್ರಿ ಅಪರಾಧಗಳ ಸಂಖ್ಯೆ ತಗ್ಗಿಸಲು ಸಿಬ್ಬಂದಿ ಹಾಗೂ ಅಧಿಕಾರಿಗಳು ಎಂಸಿಸಿಟಿಎನ್‌ಎಸ್ ಆಪ್ ಬಳಸುತ್ತಿದ್ದಾರೆ. ರಾತ್ರಿ ಅನಾವಶ್ಯಕವಾಗಿ ಅಪರಾಧ ಹಿನ್ನೆಲೆಯುಳ್ಳವರು ಓಡಾಡುವುದನ್ನು ಇದರಿಂದ ತಡೆಗಟ್ಟಬಹುದು. -ರತನಕುಮಾರ ಜಿರಗಿಹಾಳ, ಸಿಪಿಐ ಇಂಡಿ