ಅರಸೀಕೆರೆ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಛೇಂಬರ್ ಆಫ್ ಕಾಮರ್ಸ್‌ನ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನವಲಗುಂದ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಛೇಂಬರ್ ಕಾಮರ್ಸ್‌ನ ಸಹಯೋಗದಲ್ಲಿ ಗುರುವಾರ ಹಾರನಹಳ್ಳಿ ರಾಮಸ್ವಾಮಿ ಸಮುದಾಯ ಭವನದಲ್ಲಿ ಹಮ್ಮಿಕೊಡಿದ್ದ ವಿಶ್ವಕರ್ಮ ಯೋಜನೆ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದುಡಿಯುವ ಕೈಗಳಿಗೆ ಉದ್ಯೋಗ ನೀಡಬೇಕು ಎನ್ನುವ ಉದ್ದೇಶದಿಂದ ಮಹತ್ವದ ಯೋಜನೆಗೆ ಕೇಂದ್ರ ಸರ್ಕಾರ ಮುನ್ನುಡಿ ಬರೆದಿದೆ. ಟೈಲರಿಂಗ್, ಕುಂಬಾರಿಕೆ, ಬುಟ್ಟಿ, ಚಾಪೆ ತಯಾರಿಕೆ ಸೇರಿದಂತೆ 17ಕ್ಕೂ ಹೆಚ್ಚಿನ ಉಪಕಸುಬಗಳಲ್ಲಿ ತೊಡಗಿಸಿಕೊಳ್ಳುವವರಿಗೆ ತರಬೇತಿ ನೀಡುವುದರ ಜತೆಗೆ ಸಾಲ ಸೌಲಭ್ಯಕ್ಕೂ ಅವಕಾಶ ಕಲ್ಪಿಸಲಾಗಿದೆ. ಎಲ್ಲರೂ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.
ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸರ್ಕಾರದ ಜತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಉಚಿತ ನೋಂದಣಿ ಜತೆಗೆ, ದಿನಭತ್ಯೆ ಆಧಾರಿತ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ನಿರುದ್ಯೋಗಿ ಯುವ ಸಮುದಾಯ ಗ್ರಾಮೀಣ ಉಪಕಸುಬಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಆರ್ಥಿಕ ಸ್ವಾಲಂಬನೆ ಸಾಧಿಸಬೇಕು ಎಂದು ತಿಳಿಸಿದರು.
ಚಿನ್ನ,ಬೆಳ್ಳಿ ವರ್ತಕರ ಸಂಘದ ತಾಲೂಕು ಅಧ್ಯಕ್ಷ ನೇವರ್ತಿ ಜಾದವ್, ಜನ ಜಾಗೃತಿ ವೇದಿಕೆ ಅಧ್ಯಕ್ಷ ಗಣೇಶ್ ಮೂರ್ತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಅಕ್ಷತಾ ರೈ, ಸಮನ್ವಯಾಧಿಕಾರಿ ನರಸಿಂಹ ನಾಯಕ್, ಛೇಂಬರ್ ಕಾಮರ್ಸ್ ನಿರ್ದೇಶಕ ಸುನೀಲ್ ಹಾಜರಿದ್ದರು.