ನೆಲಮಂಗಲ ಚನ್ನಪ್ಪಬಡಾವಣೆಯಲ್ಲಿನ ಮುನೇಶ್ವರ ದೇಗುಲದ ಬಳಿ ಹೊಸ ಬೀದಿ ದೀಪ ಅಳವಡಿಕೆಗೆ ನಗರಸಭೆ ಅಧ್ಯಕ್ಷ ಎನ್.ಗಣೇಶ್ ಚಾಲನೆ ನೀಡಿದರು. ನಗರಸಭೆ ಉಪಾಧ್ಯಕ್ಷ ಜಿ.ಆನಂದ್, ಸ್ಥಾಯಿಸಮಿತಿ ಅಧ್ಯಕ್ಷ ಸುನೀಲ್ ಮೂಡ್, ಜಂಟಿ ಅಭಿಯಂತರ ಶ್ರೀನಿವಾಸ್ ಇದ್ದರು. 
ಜಿಲ್ಲೆ

ಮಿತವಾಗಿ ನೀರು ಬಳಸಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಸಾರ್ವಜನಿಕರಿಗೆ ನೆಲಮಂಗಲ ನಗರಸಭೆ ಅಧ್ಯಕ್ಷ ಗಣೇಶ್ ಸಲಹೆ

ನೆಲಮಂಗಲ: ಬೇಸಿಗೆ ದಿನಗಳು ಆರಂಭವಾಗಿದ್ದು, ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ನಗರದ ನಾಗರಿಕರು ಬೇಸಿಗೆಯಲ್ಲಿ ನೀರನ್ನು ಮಿತವಾಗಿ ಬಳಸಿ ಪೋಲಾಗದಂತೆ ಎಚ್ಚರವಹಿಸಿ ನಗರಸಭೆಯೊಂದಿಗೆ ಸಹಕರಿಸಬೇಕೆಂದು ನಗರಸಭೆ ಅಧ್ಯಕ್ಷ ಎನ್.ಗಣೇಶ್ ಮನವಿ ಮಾಡಿದರು.

ನಗರದ ಚನ್ನಪ್ಪ ಬಡಾವಣೆಯಲ್ಲಿನ ಮುನೇಶ್ವರ ದೇಗುಲದ ಬಳಿ ಹೊಸ ಬೀದಿದೀಪ ಅಳವಡಿಕೆ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ನಗರದ ನಾಗರಿಕರಿಗೆ ಸಮರ್ಪಕ ಮೂಲ ಸೌಕರ್ಯ ಕಲ್ಪಿಸಿಕೊಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ನೆಲಮಂಗಲ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿದ್ದು, 4 ಗ್ರಾಮ ಪಂಚಾಯಿತಿ ಪ್ರದೇಶಗಳನ್ನು ವಿಲೀನ ಮಾಡಿಕೊಂಡಿರುವುದು ಒಂದೆಡೆಯಾದರೆ ಸಮರ್ಪಕ ಮೂಲ ಸೌಕರ್ಯ ಕಲ್ಪಿಸುವುದು ಸುಲಭವಲ್ಲ. ನಿಯಮಾನುಸಾರ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಅಭಿವೃದ್ಧಿಪಡಿಸಿರುವ ಕೆಲ ಅನಧಿಕೃತ ವಸತಿ ಬಡಾವಣೆಗಳಲ್ಲಿ ಸಮಸ್ಯೆಗಳು ತಲೆದೋರುತ್ತಿವೆ ಎಂದರು. ನಗರಸಭೆಗೆ ವಿಲೀನವಾಗಿರುವ 4 ಹೊಸ ಪ್ರದೇಶಗಳಿಗೆ ತಲಾ 200 ಬೀದಿದೀಪ, ಹಳೆಯ ಪುರಸಭಾ ಪ್ರದೇಶಗಳಲ್ಲಿನ 23 ವಾರ್ಡ್‌ಗಳಿಗೆ ತಲಾ 20 ದೀಪಗಳನ್ನು ವಿತರಣೆ ಮಾಡಲಾಗಿದ್ದು, ಶೀಘ್ರದಲ್ಲಿ ಅಳವಡಿಕೆ ಕಾರ್ಯ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರ ರವಿ ಮಾಹಿತಿ ನೀಡಿದರು.

ಬೀದಿ ದೀಪ ಅಳವಡಿಕೆ ಕಾರ್ಯಕ್ಕೆ ಚಾಲನೆ ನೀಡುವ ಮುನ್ನ ಮುನೇಶ್ವರಸ್ವಾಮಿಗೆ ಪೂಜೆ ಸಲ್ಲಿಸಲಾಯಿತು. ನಗರಸಭೆ ಉಪಾಧ್ಯಕ್ಷ ಜಿ.ಆನಂದ್, ವಿದ್ಯುತ್ ವಿಭಾಗದ ಅಭಿಯಂತರೆ ಪ್ರಿಯಾ ರಚನಾ, ಸಿಬ್ಬಂದಿ ಶಿವು, ಮುಖಂಡರಾದ ಲೋಕೇಶ್, ಬಸವರಾಜು ಇದ್ದರು.

ಗೊಂದಲಕ್ಕೆ ಅವಕಾಶ ಬೇಡ: ಕಳೆದ ಕೆಲ ವರ್ಷಗಳಿಂದಲೂ ಬೀದಿ ದೀಪಗಳ ಬೇಡಿಕೆಯನ್ನು ಸದಸ್ಯರು ಇಟ್ಟಿದ್ದು, ಇದೀಗ ಗುಣಮಟ್ಟದ ಅಧಿಕ ಸಾಮಾರ್ಥ್ಯದ ಹೊಸ ಬೀದಿ (ಎಲ್‌ಇಡಿ) ದೀಪ ಅಳವಡಿಕೆ ಮಾಡಲಾಗುತ್ತಿದೆ. ಅದರ ನಿರ್ವಹಣೆಯನ್ನು ನಗರಸಭೆಯಿಂದ ಮಾಡಲಾಗುವುದು. ಬೀದಿದೀಪ ಅಳವಡಿಕೆ ಜವಾಬ್ದಾರಿ ಹೊತ್ತಿರುವ ಗುತ್ತಿಗೆದಾರರು ಆಯಾ ವಾರ್ಡ್ ಸದಸ್ಯರಿಗೆ ಮುಂಚಿತವಾಗಿ ಮಾಹಿತಿ ಅಳವಡಿಕೆ ಮಾಡಬೇಕು. ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡಬಾರದು ಎಂದು ನಗರಸಭೆ ಅಧ್ಯಕ್ಷ ಎನ್.ಗಣೇಶ್ ಹೇಳಿದರು.