ಬೆಂಗಳೂರು: ಮಳೆ ನೀರು ಕೊಯ್ಲು ಅಳವಡಿಸಿಕೊಂಡು ಮಿತವಾಗಿ ನೀರು ಬಳಸುವಂತೆ ಜಿಪಂ ಸಿಇಒ ಎನ್.ಎಂ. ನಾಗರಾಜ್ ಸಲಹೆ ನೀಡಿದರು.
ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿಯ ಸಾರಥಿ ಝಲಕ್ ಸಮುದಾಯ ರೇಡಿಯೋ ಕೇಂದ್ರದಲ್ಲಿ ಕರ್ನಾಟಕ ಸರ್ಕಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ‘ಶುದ್ಧ ಜಲ, ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವಸಂಕುಲ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೈಗಾರಿಕೆಗಳಲ್ಲಿಯೂ ಹೆಚ್ಚು ನೀರು ಪೋಲು ಮಾಡದಂತೆ ಸೂಚಿಸಲಾಗಿದ್ದು, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡು ಸಮರ್ಪಕವಾಗಿ ಬಳಸಿಕೊಳ್ಳಲು ಸಲಹೆ ನೀಡಿದರು.
ಮನೆಗಳಲ್ಲಿ ಪೈಪ್ ಬಳಸಿ ವಾಹನ ತೊಳೆಯುವ ಬದಲು ಬಕೆಟ್‌ನಲ್ಲಿ ನೀರು ಬಳಸುವುದು ಸೂಕ್ತ. ಸ್ಥಾನಕ್ಕೆ ಷವರ್ ಬಳಕೆ ಬೇಡ, ಭಾರತೀಯ ಮಾದರಿಯ ಶೌಚಗೃಹ ಬಳಕೆ ಸೂಕ್ತ ಎಂದರು. ಸಾರ್ವಜನಿಕ ಸ್ಥಳಗಳಲ್ಲಿ ನೀರು ಪೋಲಾಗುವುದು ಗಮನಕ್ಕೆ ಬಂದರೆ ಕೂಡಲೇ ಗ್ರಾಪಂ ಗಮನಕ್ಕೆ ತರುವ ಜತೆಗೆ ನೀರು ಪೋಲಾಗುವುದನ್ನು ತಡೆಗಟ್ಟಬೇಕು. ಮಕ್ಕಳಿಗೆ ಹಣ ಉಳಿತಾಯ ಮಾಡುವುದನ್ನು ಹೇಳಿಕೊಟ್ಟಂತೆ ನೀರು ಉಳಿತಾಯ ಮಾಡುವುದನ್ನೂ ಹೇಳಿಕೊಡಬೇಕು ಎಂದು ನಾಗರಾಜ್ ಹೇಳಿದರು.
ಜಲ ಜೀವನ ಮಿಷನ್ ಯೋಜನೆಯಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ಮನೆಗಳಿಗೂ ನಲ್ಲಿ ಸಂಪರ್ಕ ನೀಡಿ ವಾಟರ್ ಮೀಟರ್ ಅಳವಡಿಸಲಾಗುವುದು ಎಂದು ತಿಳಿಸಿದರು.
ಜಗತ್ತಿಗೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನಮ್ಮ ಜಿಲ್ಲೆ ಮಳೆ ಅಂತರ್ಜಲ ಮೂಲಗಳ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ನೀರು ಪೋಲಾಗುವಿಕೆ ತಡೆಗಟ್ಟುವುದು ನಮ್ಮ ಜವಾಬ್ದಾರಿ ಎಂದು ರೇಡಿಯೋ ಮ್ಯಾನೇಜರ್, ಆರ್‌ಜೆ ಸುನೀಲ್ ಅಭಿಪ್ರಾಯಪಟ್ಟರು.