ಚಿತ್ರದುರ್ಗ: ಕ್ರೀಡಾಭಿವೃದ್ಧಿಗೆ ಶೇ.2ರಷ್ಟು ಅನುದಾನ ಮೀಸಲಿಡಲು ಸರ್ಕಾರ ಈ ಹಿಂದೆಯೇ ಜಿಲ್ಲಾ ಪಂಚಾಯಿತಿ, ನಗರಸಭೆ ಸೇರಿ ಸ್ಥಳೀಯ ಸಂಸ್ಥೆಗಳಿಗೆ ಆದೇಶಿಸಿದೆ. ಅದು ಸದ್ಬಳಕೆಯಾಗಬೇಕು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ಜಿಲ್ಲಾಡಳಿತದಿಂದ ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 14, 17 ವರ್ಷ ವಯೋಮತಿಯೊಳಗಿನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ಜಿಲ್ಲಾಮಟ್ಟದ ಹಾಗೂ ಅಂಗವಿಕಲ ಮಕ್ಕಳ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಮೂಲಸೌಕರ್ಯದ ಜತೆ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯಿದೆ. ಇದರಿಂದಾಗಿ ಸಾಧನೆಗೆ ಅಡ್ಡಿಯುಂಟಾಗುತ್ತಿದೆ. ಸ್ಥಳೀಯವಾಗಿ ಲಭ್ಯವಾಗುವ ಅನುದಾನ ಕ್ರೋಡಿಕರಿಸಿ ಕ್ರೀಡಾಪಟುಗಳಿಗೆ ಟ್ರಾಕ್‌ಸೂಟ್, ಶೂ, ನೀ ಕ್ಯಾಪ್ ವಿತರಿಸಬೇಕು. ಕ್ರೀಡಾ ಸಾಧಕರಿಗೆ ಕಾಲೇಜು ಪ್ರವೇಶಾತಿಯಲ್ಲಿ ಶುಲ್ಕ ವಿನಾಯಿತಿ ನೀಡಬೇಕು ಎಂದರು.
ಚಿಕ್ಕಪುಟ್ಟ ರಾಷ್ಟ್ರಗಳು ಒಲಿಂಪಿಕ್‌ನಲ್ಲಿ ಉತ್ತಮ ಸಾಧನೆ ತೋರಿಸುತ್ತಿವೆ. ಭಾರತವು ಕ್ರೀಡೆಯಲ್ಲಿ ಸಾಧನೆ ಮಾಡಲು ಎಲ್ಲರೂ ಶ್ರಮಿಸಬೇಕಿದೆ. ಈ ಕ್ಷೇತ್ರದಲ್ಲಿ ತೋರುವ ಸಾಧನೆ ಅಂತರಾಷ್ಟ್ರೀಯ ಮನ್ನಣೆ ಗಳಿಸಲು ಸಹಕಾರಿಯಾಗಲಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರಮೋದಿ ಅವರು ಖೇಲೋ ಇಂಡಿಯಾ ಅಭಿಯಾನ ಪ್ರಾರಂಭಿಸಿ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬುತ್ತಿದ್ದಾರೆ ಎಂದು ತಿಳಿಸಿದರು.
ಜಿಪಂ ಸಿಇಒ ಎಂ.ಎಸ್.ದಿವಾಕರ್ ಮಾತನಾಡಿ, ಕ್ರೀಡಾಪಟುಗಳಿಗೆ ಶಿಸ್ತು, ಏಕಾಗ್ರತೆ, ಸ್ಪೂರ್ತಿ ತುಂಬುವ ಕೆಲಸವಾಗಬೇಕು. ಸೋಲು-ಗೆಲುವು ಸಮನಾಗಿ ಸ್ವೀಕರಿಸಬೇಕು ಎಂದರು.
ಸಿಟಿಇ ಪದ ನಿಮಿತ್ತ ಪ್ರಾಂಶುಪಾಲ ಎಚ್.ಮಂಜುನಾಥ್, ಡಿಡಿಪಿಐ ರವಿಶಂಕರ್ ರೆಡ್ಡಿ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಪರುಶುರಾಮಪ್ಪ ಇತರರಿದ್ದರು.