ಮದ್ದೂರು: ಗ್ರಾಮೀಣ ಪ್ರದೇಶದ ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕೆ ಸಂಘಗಳು ಪೂರಕವಾಗಿವೆ ಎಂದು ಶಿಶು ಅಭಿವೃದ್ಧಿ ಮತ್ತು ಮಹಿಳಾ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ತನುಜಾ ಹೇಳಿದರು.
ತಾಲೂಕಿನ ನೀಲಕಂಠನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಬುದ್ಧಿನಾಥ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಿಳೆಯರು ಸರ್ಕಾರ, ಸಂಘ, ಸಂಸ್ಥೆಗಳಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಚೇತನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರಲ್ಲಿ ಕೀಳರಿಮೆ ಹೋಗಲಾಡಿಸುವುದು, ವ್ಯವಹಾರ ಜ್ಞಾನ ತುಂಬುವುದು, ಕುಟುಂಬದ ಸದಸ್ಯರೊಂದಿಗೆ ಸೌಹಾರ್ದಯುತ ವಾತಾವರಣ ನಿರ್ಮಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಜೀವನದಲ್ಲಿ ಒತ್ತಡಗಳ ಮಧ್ಯೆ ಸಂತೋಷವನ್ನು ಪಡೆಯಲು ಮತ್ತು ಮಹಿಳೆಯರು ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಲು ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶತಾಯುಷಿ ಚನ್ನಮ್ಮ ಅವರನ್ನು ಸನ್ಮಾನಿಸಲಾಯಿತು. ಕೇಂದ್ರದ ಸದಸ್ಯರು, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಒಕ್ಕೂಟದ ಅಧ್ಯಕ್ಷೆ ಭಾಗ್ಯಾ, ತಾಲೂಕು ಯೋಜನಾಧಿಕಾರಿ ಬಿ.ಆರ್.ಯೋಗೀಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಎನ್.ತೇಜಾವತಿ, ವಲಯ ಮೇಲ್ವಿಚಾರಕಿ ಚೈತ್ರಾ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಾಜಶೇಖರ್, ಸೇವಾ ಪ್ರತಿನಿಧಿ ಶಾರದಮ್ಮ, ಸದಸ್ಯೆ ಲತಾ, ಕಮಲಾ ಇದ್ದರು.