ಜಿಲ್ಲೆ

ಅಪಘಾತಕ್ಕೆ ಒಳಗಾದವರ ರಕ್ಷಣೆಗೆ ಕ್ಯೂಆರ್ ಕೋಡ್

ಮೈಸೂರು: ರಸ್ತೆ ಅಪಘಾತಕ್ಕೆ ಒಳಗಾದವರನ್ನು ರಕ್ಷಿಸಲು ಹಾಗೂ ಕುಟುಂಬದವರಿಗೆ ತಕ್ಷಣ ಮಾಹಿತಿ ಒದಗಿಸಲು ಹೈವೇ ಡಿಲೈಟ್ ಡಿಜಿಟಲ್ ಸೇವಾ ವೇದಿಕೆಯು ‘ರಕ್ಷಾ ಕ್ಯೂಆರ್’ ಎಂಬ ಕ್ಯೂಆರ್ ಕೋಡ್ ಅಭಿವೃದ್ಧಿ ಪಡಿಸಿದೆ ಎಂದು ವೇದಿಕೆಯ ಗ್ರಾಹಕ ಸಂಪರ್ಕ ಅಧಿಕಾರಿ ಶೋಭಾ ಹೇಳಿದರು.

ದೇಶದಲ್ಲಿ ಪ್ರತಿ ವರ್ಷ ಸರಾಸರಿ 1.5 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಾರೆ. ಅಪಘಾತವಾದ ತಕ್ಷಣ ಚಿಕಿತ್ಸೆ ದೊರೆತರೆ ಶೇ.50 ರಷ್ಟು ಜನರನ್ನು ಬದುಕಿಸಬಹುದು. ನಮ್ಮ ವೇದಿಕೆಯು ಜಾರಿಗೆ ತಂದಿರುವ ‘ರಕ್ಷಾ ಕ್ಯೂಆರ್’ ವ್ಯವಸ್ಥೆಯು ಹಲವು ಜನರ ಜೀವ ಉಳಿಸುವ ವಿಶ್ವಾಸ ಹೊಂದಿದ್ದೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಕ್ಷಾ ಕ್ಯೂಆರ್’ ಸ್ಕಾೃನ್ ಮಾಡಿದರೆ ವಾಹನ ಚಾಲಕರ ಮೊಬೈಲ್ ಸಂಖ್ಯೆ ಸೇರಿದಂತೆ ಸಂಪೂರ್ಣ ಮಾಹಿತಿ ತೆರೆದುಕೊಳ್ಳುತ್ತದೆ. ಅಪಘಾತವಾದ ತಕ್ಷಣ ಕುಟುಂಬದವರಿಗೆ ಹಾಗೂ ಹತ್ತಿರದ ಆಸ್ಪತ್ರೆ, ಪೊಲೀಸ್ ಠಾಣೆಗೆ ಕರೆ ಮಾಡಲು ಕ್ಯೂಆರ್ ಕೋಡ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಕ್ಯೂಆರ್ ಕೋಡ್ ಬಳಸಿ ಕರೆಮಾಡಿದರೆ ಕರೆ ಮಾಡಿದವರ ಮಾಹಿತಿ ಗೌಪ್ಯವಾಗಿರುತ್ತದೆ. ಅಲ್ಲದೆ, ಕರೆ ಸ್ವೀಕರಿಸಿದವರ ಮೊಬೈಲ್‌ನಲ್ಲಿ ನಂಬರ್ ಡಿಸ್ಪ್ಲೆ ಆಗುವುದಿಲ್ಲ. ಆಸಕ್ತರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೈವೇ ಡಿಲೈಟ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಕ್ಯೂಆರ್ ಕೋಡ್ ಪಡೆಯಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಆ್ಯಪ್ ಸಿಬ್ಬಂದಿ ಮಲ್ಲಣ್ಣ, ರಕ್ಷಿತ್, ಇಬ್ರಾಹಿಂ, ಮುರಳಿ ಇದ್ದರು.