ಕಲಾದಗಿ: ಸಹಕಾರಿ ತತ್ವವನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರುತ್ತಿರುವುದರ ಜೊತೆಗೆ ಗ್ರಾಮೀಣ ಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಗ್ರಾಮದ ದಾಳಿಂಬೆ ಬೆಳೆಗಾರರ ಪತ್ತಿನ ಸಹಕಾರಿ ಸಂಘ ಎಲ್ಲರ ನಂಬಿಕೆಗೆ ಪಾತ್ರವಾಗಿದೆ. ಸಂಘ ಪ್ರಸಕ್ತ ವರ್ಷ 60.45 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಎಲ್.ಬಿಲ್‌ಕೇರಿ ಹೇಳಿದರು.
ಇಲ್ಲಿನ ಹಣ್ಣು ಬೆಳೆಗಾರರ ಪ್ರೌಢಶಾಲೆ ಸಭಾಭವನದಲ್ಲಿ ಭಾನುವಾರ ನಡೆದ ಸಂಘದ 15ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಶೇ.10 ರಷ್ಟು ಲಾಭಾಂಶ ಹಂಚಲು ಸಂಘ ನಿರ್ಧರಿಸಿದೆ. 3333 ಸದಸ್ಯರ 168.38 ಲಕ್ಷ ಷೇರು ಬಂಡವಾಳದೊಂದಿಗೆ ಸಂಘ ಪ್ರಗತಿ ಸಾಧಿಸಿದೆ ಎಂದು ವಿವರಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿ ಸಾಧನೆ ಮಾಡಿದ 20 ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷ ಎಸ್.ಟಿ.ಗಾಣಿಗೇರ, ಲೋಕಾಪುರ ಹಾಗೂ ಚಿಕ್ಕಾಲಗುಂಡಿ ಶಾಖೆ ಸಲಹಾ ಸಮಿತಿ ಅಧ್ಯಕ್ಷ ವಿ.ಬಿ.ಸಿಗರೆಡ್ಡಿ, ಬಿ.ಜಿ.ಹೊಸ ಅಂಗಡಿ, ಸಿಇಒ ಎಸ್.ಜಿ.ಚನ್ನಾಪೂರ, ನಿರ್ದೇಶಕ ವಿ.ಜಿ.ದೇಶಪಾಂಡೆ, ವ್ಯವಸ್ಥಾಪಕಿ ರೇಖಾ ಮಡ್ಡಿ, ವಿನೋದ ದೇಶಮುಖ, ಬಿ.ಎಚ್.ನಿಂಗನಗೌಡರ ಇದ್ದರು.