ತುಮಕೂರು : ಕರೊನಾ ಸಂಕಷ್ಟದಲ್ಲಿ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೊರೆಯಾಗದಂತೆ ತುಮಕೂರು ವಿವಿ ವಿದ್ಯಾರ್ಥಿಸ್ನೇಹಿ ನಿರ್ಣಯಗಳನ್ನು ತೆಗೆದುಕೊಂಡಿದೆ.
ವಿವಿ ಕುಲಪತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಿಂಡಿಕೇಟ್ ಸದಸ್ಯರ ಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ವಿಶ್ವವಿದ್ಯಾಲಯದ ಆಂತರಿಕ ಸಂಪನ್ಮೂಲವನ್ನು ಕಟ್ಟಡ ನಿರ್ಮಾಣಕ್ಕೆ ಬಳಸದಿರುವ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲಾಗಿದೆ.
ಬಜೆಟ್‌ನಲ್ಲಿ 28 ಕೋಟಿ ರೂ.ಗಳನ್ನು ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳುವ ಅಜೆಂಡಾವಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೆಲ ಸದಸ್ಯರು, ವಿದ್ಯಾರ್ಥಿಗಳಿಂದ ಶುಲ್ಕದ ರೂಪದಲ್ಲಿ ಪಡೆದ ಹಣ ವಿದ್ಯಾರ್ಥಿಗಳಿಗೆ ಬಳಕೆಯಾಗಬೇಕು ಎಂದು ಪಟ್ಟು ಹಿಡಿದು ನಿರ್ಣಯ ತೆಗೆದುಕೊಂಡರು.
ವಿವಿ ಆವರಣದಲ್ಲಿಯೇ ಅಧ್ಯಯನ ಪೀಠ!: ತುಮಕೂರು ವಿವಿಯಲ್ಲಿರುವ ಎಲ್ಲ ಅಧ್ಯಯನ ಪೀಠಗಳು ಒಂದೇ ಸೂರಿನಡಿ ಇರಬೇಕು ಹಾಗೂ ಮುಂದಿನ ಮೂರು ತಿಂಗಳಲ್ಲಿ ಪೀಠಗಳಲ್ಲಿ ಉದ್ದೇಶಿತ ಎಲ್ಲ ಕಾರ್ಯಕ್ರಮಗಳು ನಡೆಯಬೇಕು ಎಂದು ನಿರ್ಣಯಿಸಲಾಗಿದೆ. ಪರಮಶಿವಯ್ಯ ಅಧ್ಯಯನ ಪೀಠಕ್ಕೆ ವಿವಿ ಆವರಣದ ಹೊರಗೆ ಜಿಲ್ಲಾಡಳಿತ ತರಾತುರಿಯಲ್ಲಿ ಜಾಗ ನೀಡಿರುವುದು ಹಾಗೂ ಇದರ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಗೆ ಪಡೆಯದಿರುವ ಬಗ್ಗೆ ಕೆಲವರು ಆಕ್ಷೇಪಿಸಿದ್ದು ಎಲ್ಲ ಅಧ್ಯಯನ ಪೀಠಗಳು ವಿವಿ ಆವರಣದಲ್ಲಿಯೇ ಇರಲಿ ಎಂಬ ನಿರ್ಣಯಕ್ಕೆ ಸರ್ವಸದಸ್ಯರು ಒಪ್ಪಿಗೆ ನೀಡಿದರು ಎಂದು ಸಭೆಯಲ್ಲಿದ್ದ ಸದಸ್ಯರು ತಿಳಿಸಿದರು. ಸಭೆಯಲ್ಲಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಕುಲಸಚಿವರಾದ ಪ್ರೊ.ಗಂಗಾನಾಯ್ಕೊ, ಪ್ರೊ.ಕೊಟ್ರೇಶ್ ಸೇರಿದಂತೆ ಸಿಂಡಿಕೇಟ್ ಸದಸ್ಯರು ಇದ್ದರು.
ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಫೆಲೋಶಿಪ್: ವಿಶ್ವವಿದ್ಯಾನಿಯಲದ ಸಂಶೋಧನಾ ವಿದ್ಯಾರ್ಥಿಗಳಿಗೆ ಕೆಲವು ದಿನಗಳಿಂದ ನೀಡದೆ ಬಾಕಿ ಉಳಿಸಿಕೊಂಡಿರುವ ಎಲ್ಲ ಫೆಲೋಶಿಪ್‌ಗಳನ್ನು ಕೂಡಲೇ ನೀಡುವಂತೆ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅವರು ಸಭೆಯಲ್ಲಿ ಸೂಚನೆ ನೀಡುವ ಮೂಲಕ ವಿದ್ಯಾರ್ಥಿಗಳ ಹಿತ ಕಾಯ್ದಿದ್ದಾರೆ. 2012 ಹಾಗೂ 2013ರಲ್ಲಿ ಪ್ರವೇಶ ಪಡೆದು ನಾನಾ ಕಾರಣಗಳಿಂದ ಪ್ರಬಂಧ ಮಂಡಿಸಲಾಗದ ಸಂಶೋಧನಾರ್ಥಿಗಳಿಗೆ ಮತ್ತಷ್ಟು ದಿನ ದಂಡ ಶುಲ್ಕವಿಲ್ಲದೆ ಸಮಯಾಕಾಶ ನೀಡಲು ಒಪ್ಪಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ.
ಚರ್ಚೆಗೆ ಬಾರದ ಪ್ರಾಧ್ಯಾಪಕರ ಜೇಷ್ಠತೆ: ವಿವಿ ಸ್ನಾತಕೋತ್ತರ ವಿಭಾಗದಲ್ಲಿ ಪಾಠ ಮಾಡಲು ಜೇಷ್ಟತೆ ಆಧಾರದ ಅರ್ಹತೆ ಇಲ್ಲದಿದ್ದರೂ ಕೆಲವು ಉಪನ್ಯಾಸಕರು ಯುಜಿಯಿಂದ ಪಿಜಿಗೆ ನಿಯೋಜನೆಯಾಗಿರುವ ಬಗ್ಗೆ ಕ್ರಮಕೈಗೊಳ್ಳಲು ಬಗ್ಗೆ ಸಭಾ ನಡಾವಳಿಯಲ್ಲಿ ವಿಷಯವಿದ್ದರೂ ಸಿಂಡಿಕೇಟ್‌ನಲ್ಲಿ ಪ್ರಸ್ತಾಪವಾಗದಿರುವುದು ಸಾಕಷ್ಟು ಅನುಮಾನ ಮೂಡಿಸಿದೆ. ಅನರ್ಹ ಪ್ರಾಧ್ಯಾಪಕರು ಸ್ನಾತಕೋತ್ತರ ವಿಭಾಗದಲ್ಲಿಯೇ ಉಳಿಯಲು ಸಿಂಡಿಕೇಟ್ ಸದಸ್ಯರ ಬಳಿ ಲಾಬಿ ನಡೆಸಿರುವ ಆರೋಪಗಳು ಕೇಳಿಬಂದಿವೆ.
ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್: ಕರೊನಾ ಸಂಕಷ್ಟದ ಕಾರಣಕ್ಕೆ ರೈತ ಕುಟುಂಬಗಳು ಸಂಕಷ್ಟದಲ್ಲಿವೆ, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೊರೆಯಾಗದಂತೆ ಸಾಧ್ಯವಾದ ಕಡೆಗಳಲ್ಲಿ ಶುಲ್ಕ ವಿನಾಯಿತಿ ಅಥವಾ ಶುಲ್ಕವನ್ನೇ ಕಡಿಮೆಗೊಳಿಸುವ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಲಾಯಿತು. ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ವಿಶ್ವವಿದ್ಯಾನಿಲಯದ ಆಂತರಿಕ ಆದಾಯವನ್ನು ವಿದ್ಯಾರ್ಥಿಗಳ ಹಿತದೃಷ್ಟಿಗೆ ಬಳಸುವ ನಿರ್ಧಾರದಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.