ಮಡಿಕೇರಿ: ಮಡಿಕೇರಿ: ರೈತರು ಮಣ್ಣು ಪರೀಕ್ಷೆ ಮಾಡಿ ಅದಕ್ಕೆ ಅನುಗುಣವಾಗಿ ಗೊಬ್ಬರ ಬಳಕೆ ಮಾಡುವುದು ಸೂಕ್ತ ಎಂದು ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಹೇಳಿದರು.
ಕೃಷಿ ಪರಂಪರಾಗತ ಯೋಜನೆಯಡಿ ಸಾವಯವ ಕೃಷಿ ಮಾಡುವ ರೈತ ಮತ್ತು ರೈತ ಮಹಿಳೆಯರಿಗೆ ತೋಟಗಾರಿಕೆ ಮತ್ತು ಭಾಗಂಡೇಶ್ವರ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ವತಿಯಿಂದ ಭಾಗಮಂಡಲದ ಜೇನು ಕೃಷಿ ತಾಂತ್ರಿಕ ತರಬೇತಿ ಸಭಾಂಗಣದಲ್ಲಿ ಆಯೋಜಿಸಿದ್ದ ತೆಂಗಿನ ಗಿಡ ಹಾಗೂ ಜೇನುಪೆಟ್ಟಿಗೆ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಭೌಗೋಳಿಕವಾಗಿ ಇಂದು ಹವಾಮಾನ ವೈಪರೀತವಾಗುತ್ತಿದ್ದು ಸಂದರ್ಭಕ್ಕೆ ಅನುಗುಣವಾಗಿ ರೈತರು ಬೆಳೆಗಳ ಬದಲಾವಣೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರೈತರು ಚಿಂತನೆ ಮಾಡಬೇಕಿದೆ. ಕಾಫಿ ಹಾಗೂ ಎಲಕ್ಕಿ, ಕಿತ್ತಳೆ, ಕಾಳುಮೆಣಸು, ಇನ್ನಿತರ ಬೆಳೆಗಳು ಕುಂಠಿತವಾಗುತ್ತಿದೆ. ರೈತರು ಇತರ ತೋಟಗಾರಿಕಾ ಬೆಳೆಗಳತ್ತ ಗಮನಹರಿಸ ಬೇಕಿದೆ. ಮುಂದಿನ ದಿನಗಳಲ್ಲಿ ಗೊಬ್ಬರ ಖರೀದಿ ಮಾಡಲು ಪಹಣಿ ಹೊಂದಿದ ರೈತರಿಗೆ ಮಾತ್ರ ರಸಗೊಬ್ಬರ ದೊರೆಯಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದೆ. ರೈತರು ಸಾವಯುವ ಗೊಬ್ಬರದ ಕಡೆ ಗಮನಹರಿಸಬೇಕಿದೆ. ಕೊಡಗಿನ ಏಲಕ್ಕಿಗೆ ೫೦೦ ರಿಂದ ೬೦೦ ಧಾರಣೆ ದೊರೆಯುತ್ತಿದ್ದು ಭಾಗಮಂಡಲ ಜೇನು ಕೃಷಿಕರ ಸಹಕಾರ ಸಂಘದಲ್ಲಿ ಉತ್ತಮ ತಳಿಯ ಏಲಕ್ಕಿಗೆ ೧೧೦೦-೧೨೦೦ ರೂ ದೊರೆಯಲಿದೆ. ರೈತರು ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಭಾಗಮಂಡಲದ ಭಗಂಡೇಶ್ವರ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಕೋಡಿ ಪೊನ್ನಪ್ಪ ಮಾತನಾಡಿ, ರಾಸಾಯನಿಕ ಗೊಬ್ಬರದ ಬಳಕೆಯಿಂದಾಗಿ ಇಂದು ಭೂಮಿಯಲ್ಲಿ ಯಾವುದೇ ಸತ್ವಗಳಿಲ್ಲದೆ ಭೂಮಿಯಲ್ಲಿರುವ ಕೀಟ ಜಲಚಾರಗಳು ನಶಿಸುತ್ತಿವೆ. ಸಾವಯವ ಗೊಬ್ಬರ ಬಳಕೆ ಮಾಡಿದಲ್ಲಿ ನಿಧಾನಗತಿಯಲ್ಲಿ ಆದರೂ ಉತ್ತಮ ಇಳುವರಿ ಪಡೆಯುವುದರೊಂದಿಗೆ ಉತ್ತಮ ಆರೋಗ್ಯ ಜನರಿಗೆ ದೊರೆಯಲಿದೆ. ಅಲ್ಲದೆ ಸಾವಯವ ಗೊಬ್ಬರದಿಂದ ಬೆಳೆದ ವಸ್ತುಗಳಿಗೆ ಹೆಚ್ಚಿನ ಬೆಲೆ ದೊರಕಲಿದೆ ಎಂದರು.
ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಪ್ರಮೋದ್ ಮಾತನಾಡಿ, ಸಾವಯವ ಗೊಬ್ಬರದಿಂದ ಪಡೆದ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದರ ಅನುಗುಣವಾಗಿ ಸರ್ಕಾರ ಭಾಗಮಂಡಲದ ರೈತ ಕಂಪನಿಯಲ್ಲಿ ಸದಸ್ಯರಾಗಿರುವ ಸಾವಯವ ಕೃಷಿಕರಿಗೆ ಗಿಡ ಹಾಗೂ ನೆರವು ನೀಡಲು ಮುಂದೆ ಬಂದಿದ್ದು ರೈತರು ಪ್ರಯೋಜನ ಪಡೆದುಕೊಳ್ಳಬೇಕು. ಜೇನುಪೆಟ್ಟಿಗೆ ಪಡೆದುಕೊಳ್ಳುವುದರೊಂದಿಗೆ ರೈತರಿಗೆ ಸಿಗುವ ಸಹಾಯಧನ ಮತ್ತು ಪ್ರಯೋಜನವನ್ನು ರೈತರಿಗೆ ನೇರವಾಗಿ ತಲುಪಿಸುವ ಕೆಲಸವಾಗುತ್ತಿದ್ದು, ಮುಂದಿನ ಮೂರು ವರ್ಷಗಳಲ್ಲಿ ರೈತರನ್ನು ಉತ್ತೇಜಿಸುವ ಕಾರ್ಯಕ್ರಮ ನಡೆಯಲಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಮಿತಾ ವಹಿಸಿದ್ದರು. ಕಂಪನಿಯ ಉಪಾಧ್ಯಕ್ಷ ಈಶ್ವರ್ ನಿರ್ದೇಶಕರಾದ ವಿಠಲ ತೋಟಗಾರಿಕಾ ಸಹಾಯಕಾ ಅಧಿಕಾರಿ ಬಿ.ಡಿ.ವಸಂತ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ೬೭೬ ಫಲಾನುಭವಿಗಳಿಗೆ ಜೇನುಪೆಟ್ಟಿಗೆ ಹಾಗೂ ತೆಂಗಿನ ಗಿಡ ವಿತರಿಸಲಾಯಿತು.