ಜಿಲ್ಲೆ

ರಾಷ್ಟ್ರ ಧ್ವಜದಿಂದ ಖಾದಿಯನ್ನು ಕಿತ್ತು ಹಾಕಿದ್ದು ಏಕೆ?: ಪ್ರಧಾನಿಗೆ ಪತ್ರ ಬರೆದ ರಂಗಕರ್ಮಿ ಪ್ರಸನ್ನ

Mysuru

ಮೈಸೂರು: ಸ್ವಾತಂತ್ರೊೃೀತ್ಸವದ ಅಮೃತ ಮಹೋತ್ಸವ ಪ್ರಯುಕ್ತ ಮನೆ ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸಬೇಕು ಎಂದು ಕೇಂದ್ರ ಸರ್ಕಾರ ಕರೆ ನೀಡಿದೆ. ಆದರೆ, ರಾಷ್ಟ್ರ ಧ್ವಜದಿಂದ ಖಾದಿಯನ್ನು ಕಿತ್ತು ಹಾಕಿರುವುದು ಸರಿಯಲ್ಲ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಪ್ರಶ್ನಿಸಲಾಗಿದೆ ಎಂದು ಧ್ವಜ ಸತ್ಯಾಗ್ರಹ ಸಮಿತಿ ಸಂಚಾಲಕ ಹೆಗ್ಗೋಡು ಪ್ರಸನ್ನ ಹೇಳಿದರು.

ರಾಷ್ಟ್ರ ಧ್ವಜದ ಮಹತ್ವವನ್ನೇ ಪರಿಗಣಿಸದೆ ಖಾದಿ ಬದಲು ವಿದೇಶದಲ್ಲಿ ಉತ್ಪಾದಿಸಿದ ಧ್ವಜಗಳನ್ನು ಬಲವಂತವಾಗಿ ಮಾರಾಟ ಮಾಡಲು ಅಂಚೆ ಕಚೇರಿ ಹಾಗೂ ಬ್ಯಾಂಕ್‌ಗಳನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ವಿದೇಶದಲ್ಲಿ ತಯಾರಾದ ಧ್ವಜಗಳಲ್ಲಿ ಹಲವು ದೋಷಗಳು ಇದ್ದರೂ ಯಾರ ವಿರುದ್ಧವೂ ಕ್ರಮ ಕೈಗೊಳ್ಳುತ್ತಿಲ್ಲ ಏತಕ್ಕೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಖಾದಿ ಚಟುವಟಿಕೆಯನ್ನೇ ಅವಲಂಬಿಸಿರುವ ಈ ದೇಶದ ಬಡ ನೇಕಾರರ ಬದುಕನ್ನೇ ಕೇಂದ್ರ ಸರ್ಕಾರ ಕಸಿಯಲು ಹೊರಟಿದೆ. ಈ ಮೊದಲು ರಾಷ್ಟ್ರ ಧ್ವಜಗಳನ್ನು ಖಾದಿ ಸಂಸ್ಥೆಗಳ ಮೂಲಕ ಮಾರಾಟ ಮಾಡಲಾಗುತ್ತಿತ್ತು. ಇದರಿಂದಾಗಿ ಖಾದಿ ಚಟುವಟಿಕೆ ಅವಲಂಬಿಸಿರುವವರಿಗೆ ಅನುಕೂಲವಾಗುತ್ತಿತ್ತು. ಈಗ ಇದು ತಪ್ಪಿದಂತಾಗಿದೆ. ಹರ್ ಘರ್ ತಿರಂಗ ಅಭಿಯಾನವನ್ನು ಯುದ್ಧ ಭೂಮಿಯಿಂದ ಆರಂಭಿಸಿರುವುದು ಸರಿಯಲ್ಲ. ಭಾರತ ಅಹಿಂಸಾ ಚಳವಳಿಗೆ ಹೆಸರಾಗಿದ್ದು, ಇದರಿಂದಾಗಿ ಇತರ ದೇಶಗಳು ಪ್ರಶ್ನಿಸುವಂತಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಸಂಗಪ್ಪ ಮಂಟೆ, ಪಿ.ವಿ. ರಾಜಗೋಪಾಲ್, ಹ್ಯಾರಿಸ್, ಪ್ರೊ. ಕಾಳಚನ್ನೇಗೌಡ, ಬಸವರಾಜ ಪಾಟೀಲ್ ಇದ್ದರು.