ಚಿಕ್ಕಬಳ್ಳಾಪುರ : ತ್ಯಾಜ್ಯ ನೀರಿನ ಶುದ್ಧೀಕರಣಕ್ಕೆ ಯಂತ್ರಗಳನ್ನು ಬಳಸಿಕೊಳ್ಳುವುದು ಸಾಮಾನ್ಯ, ಆದರೆ ಇಲ್ಲಿನ ಜಿಲ್ಲಾಡಳಿತ ಬಾತುಕೋಳಿಗಳಿಂದಲೂ ನೀರಿನ ಸಂಸ್ಕರಣೆಗೆ ಮುಂದಾಗಿದ್ದು, ನೈಸರ್ಗಿಕ ಹಾಗೂ ವಿನೂತನ ವಿಧಾನದ ಮೂಲಕ ಯಂತ್ರಗಳ ನಿರ್ವಹಣೆ ವೆಚ್ಚದ ಹೊರೆ ಇಳಿಸಿಕೊಳ್ಳುವ ಮಾರ್ಗ ಕಂಡುಕೊಂಡಿದೆ.
ಅಣಕನೂರು ಸಮೀಪದಲ್ಲಿರುವ ನಗರಸಭೆ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಆರು ಕೊಳಗಳಿದ್ದು, ಕೊನೆಯ ಎರಡು ಕೊಳಗಳಲ್ಲಿ ಈಗಾಗಲೇ ನೂರು ಬಾತುಕೋಳಿಗಳನ್ನು ಬಿಡಲಾಗಿದೆ. ಈಜುವುದರ ಜತೆಗೆ ಮುಳುಗು ಪಕ್ಷಿಗಳಾದ ಬಾತುಕೋಳಿಗಳು ನೀರಿನಲ್ಲಿ ಚಲಿಸುವಾಗ ವೇಗವಾಗಿ ರೆಕ್ಕೆಗಳನ್ನು ಬಡಿಯುತ್ತವೆ. ಈ ಸಂದರ್ಭದಲ್ಲಿ ನೈಸರ್ಗಿಕವಾಗಿ ನೀರಿನಲ್ಲಿ ಆಮ್ಲಜನಕ ಸೇರ್ಪಡೆಯಾಗುವ ಮೂಲಕ ಕೊಳಚೆ ನೀರು ಶುದ್ಧೀಕರಣವಾಗಲಿದ್ದು, ನೈಸರ್ಗಿಕ ವಿಧಾನ ಗಮನ ಸೆಳೆಯುತ್ತಿದೆ.
ಪ್ರಸ್ತುತ ಕೊಳಚೆ ನೀರು ಸಂಸ್ಕರಣೆ ಮಾಡಲು ಯಂತ್ರಗಳನ್ನು ನೆಚ್ಚಿಕೊಳ್ಳಲಾಗಿದ್ದು, ಇದರ ಖರೀದಿ ಮತ್ತು ನಿರ್ವಹಣೆಗೆ ವೆಚ್ಚ ದುಬಾರಿಯಾಗಿದೆ, ಆದರೆ, ಬಾತುಕೋಳಿಗಳಿಂದ ನೈಸರ್ಗಿಕ ಪ್ರಕ್ರಿಯೆಯಲ್ಲಿ ನೀರು ಶುದ್ಧೀಕರಣವಾಗುತ್ತದೆ. ಸದ್ಯ ಪ್ರಾಯೋಗಿಕವಾಗಿ ನಗರಸಭೆ ವತಿಯಿಂದ ನೀರಿನ ಕೊಳಗಳಲ್ಲಿ ಬಾತುಕೋಳಿಗಳ ಮೂಲಕ ನೀರು ಸಂಸ್ಕರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.
ಇಷ್ಟೇ ಅಲ್ಲದೆ, ನಗರ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕೋಳಿ ತ್ಯಾಜ್ಯ, ಮಾರುಕಟ್ಟೆಗಳಲ್ಲಿ ಸಂಗ್ರಹವಾಗುವ ತರಕಾರಿಗಳ ತ್ಯಾಜ್ಯವನ್ನು ಬಾತುಕೋಳಿಗಳಿಗೆ ನೀಡುವುದರಿಂದ ತ್ಯಾಜ್ಯ ನಿರ್ವಹಣೆ ಸುಲಭವಾಗುವುದರ ಜತೆಗೆ ಪಕ್ಷಿಗಳ ಕಲರವ ಆಹ್ಲ್ಲಾದಕರ ವಾತಾವರಣ ನಿರ್ಮಾಣಕ್ಕೂ ಸಹಕಾರಿಯಾಗಿದೆ.
ಮೊಟ್ಟೆ ಮಾರಾಟದಿಂದ ಲಾಭ :ನಗರ ವ್ಯಾಪ್ತಿಯಿಂದ ಬರುವ ಕೊಳಚೆ ನೀರನ್ನು ನೈಸರ್ಗಿಕವಾಗಿ ಶುದ್ಧೀಕರಿಸಿ, ಮರುಬಳಕೆಗೆ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿರುವ ಗಿಡಮರಗಳಿಗೆ, ಸುತ್ತಲಿನ ರೈತರಿಗೆ ಪೂರೈಸಲಾಗುತ್ತದೆ. ಮತ್ತೊಂದೆಡೆ ಬಾತುಕೋಳಿ ವರ್ಷಕ್ಕೆ ಸರಾಸರಿ 300 ಮೊಟ್ಟೆಗಳನ್ನಿಡಲಿದ್ದು, ಮೊಟ್ಟೆಗಳ ಮಾರಾಟದಿಂದ ಬರುವ ಹಣವನ್ನು ಕೊಳಚೆ ನೀರು ಸಂಸ್ಕರಣೆ ಘಟಕದ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತದೆ.
ಘಟಕಕ್ಕೆ ಡಿಸಿ ಭೇಟಿ : ನಗರಸಭೆಯ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಆದಷ್ಟು ವೈಜ್ಞಾನಿಕ ಮತ್ತು ನೈಸರ್ಗಿಕ ವಿಧಾನಗಳಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದ ಡಿಸಿ, ಇದರಿಂದ ಪರಿಣಾಮಕಾರಿ ಮತ್ತು ಲಾಭದಾಯಕ ಫಲಿತಾಂಶ ಪಡೆಯಲು ಸಹಕಾರಿಯಾಗುತ್ತದೆ ಎಂದರು. ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ಎಂ.ರೇಣುಕಾ, ಪೌರಾಯುಕ್ತ ಲೋಹಿತ್ ಮತ್ತಿತರರು ಇದ್ದರು.