ಯಲಬುರ್ಗಾ: ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು, ಬಿತ್ತನೆ ಕಾರ್ಯ ಭರದಿಂದ ಸಾಗಿದೆ. ರೈತರು ಬಿತ್ತನೆ ಸಮಯದಲ್ಲಿ ಡಿಎಪಿ ಬದಲಾಗಿ ಸಂಯುಕ್ತ ರಸಗೊಬ್ಬರಗಳನ್ನು ಬಳಸಬೇಕು. ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಹದಿನೇಳು ಪೋಷಕಾಂಶಗಳು ಅಗತ್ಯವಾಗಿವೆ. ಇವುಗಳಲ್ಲಿ ಯಾವುದೇ ಒಂದು ಪೋಷಕಾಂಶದ ಕೊರತೆಯಾದರೂ ಸಸ್ಯಗಳ ಬೆಳವಣಿಗೆಗೆ ಪರಿಣಾಮ ಬೀರಿ ಇಳುವರಿ ಕುಂಠಿತವಾಗುತ್ತದೆ.
ಇದನ್ನೂ ಓದಿ:ಸಂಯೋಜಿತ ರಸಗೊಬ್ಬರವನ್ನೂ ಬಳಸಿ
ಮಣ್ಣಿನಿಂದ ಈ ಪೋಷಕಾಂಶಗಳು ಬೆಳೆಗಳಿಗೆ ಬೇಕಾದ ಪ್ರಮಾಣದಲ್ಲಿ ದೊರೆಯುವುದಿಲ್ಲ ಆದ್ದರಿಂದ ಕೃತಕವಾಗಿ ನೀಡುವುದು ಅನಿವಾರ್ಯ. ಸಾವಯವ (ಕೊಟ್ಟಿಗೆ ಗೊಬ್ಬರ, ಹಸಿರಲೆ ಗೊಬ್ಬರ, ಹಿಂಡಿ ಇತ್ಯಾದಿ) ಮತ್ತು ರಸಗೊಬ್ಬರಗಳಿಂದ ಒದಗಿಸಬೇಕಾಗಿದ್ದು, ರಸಗೊಬ್ಬರಗಳಲ್ಲಿ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ನೇರವಾಗಿ ದೊರೆಯುತ್ತವೆ. ಆದ್ದರಿಂದ ಅವುಗಳ ಬಳಕೆ ಅಗತ್ಯವಾಗಿದೆ. ರೈತರು ರಸಗೊಬ್ಬರವನ್ನು ಕೇವಲ ಒಂದೇ ಸಂಸ್ಥೆಯ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೆ ಡಿಎಪಿಗೆ ಪರ್ಯಾಯವಾಗಿ ಗಂಧಕ ಹಾಗೂ ಪೊಟ್ಯಾಷ್ ಒದಗಿಸುವ ರಸಗೊಬ್ಬರಗಳನ್ನೂ ಬಳಸಿ ಹೆಚ್ಚಿನ ಇಳುವರಿ ಪಡೆಯಬಹು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.