ಜಿಲ್ಲೆ

ಕೊಟ್ಟಿಗೆ ಗೊಬ್ಬರ ಬಳಿಸಿದರೆ ಹೆಚ್ಚು ಇಳುವರಿ

ಲಲಾಟಾಕ್ಷ ಎಸ್

ಹನೂರು: ಕೊಟ್ಟಿಗೆ ಗೊಬ್ಬರವನ್ನು ಹೆಚ್ಚು ಬಳಕೆ ಮಾಡುವುದರಿಂದ ಬೆಳ್ಳುಳ್ಳಿ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಸಸ್ಯರೋಗ ತಜ್ಞ ಪಂಪನಗೌಡ ತಿಳಿಸಿದರು.


ತಾಲೂಕಿನ ಅಜ್ಜೀಪುರ ಸಮೀಪದ ಕಾಂಚಳ್ಳಿ ಗ್ರಾಮದ ಜಮೀನಿನಲ್ಲಿ ಮಂಗಳವಾರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಆಯೋಜಿಸಿದ್ದ ಬೆಳ್ಳುಳ್ಳಿ ಬೆಳೆಯಲ್ಲಿ ಪರಿಸರ ಸ್ನೇಹಿ ಬೇಸಾಯ ಕ್ರಮಗಳ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಬೆಳ್ಳುಳ್ಳಿಗೆ ಉತ್ತಮ ಬೆಲೆ ಇದೆ. ಆದರೆ, ರೈತರು ಅಗತ್ಯ ಕ್ರಮವಹಿಸಿದ ಪರಿಣಾಮ ಕಾಂಚಳ್ಳಿ ಭಾಗದಲ್ಲಿ ಕೊನೆಯ ಹಂತದಲ್ಲಿ ಬೆಳ್ಳುಳ್ಳಿಗೆ ರೋಗ ಕಾಣಿಸಿಕೊಂಡಿದ್ದರಿಂದ ಇಳುವರಿ ಕಡಿಮೆಯಾಗಿರುವುದಕ್ಕೆ ಕಾರಣವಾಗಿದೆ. ಹಾಗಾಗಿ ಅಧಿಕಾರಿಗಳಿಂದ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ಪಡೆದು ಬೆಳ್ಳುಳ್ಳಿ ಬೆಳೆಯುವ ಕ್ರಮವನ್ನು ಅನುಸರಿಸಬೇಕು ಎಂದರು.


ಮಣ್ಣಿನ ಸಾವಯವ ಅಂಶವನ್ನು ಹೆಚ್ಚಿಸಲು ಕೊಟ್ಟಿಗೆ ಗೊಬ್ಬರ ಅದರಲ್ಲೂ ಸಗಣಿ ಬಳಕೆ ಮಾಡುವುದರ ಜತೆಗೆ ಕಾಲ ಕಾಲಕ್ಕೆ ತಕ್ಕಂತೆ ಅಗತ್ಯ ಔಷಧಗಳನ್ನು ಸಿಂಪಡಿಸಬೇಕು. ಇದರಿಂದ ಬೆಳೆಗೆ ಹೆಚ್ಚು ರೋಗ ತಗುಲುವುದಿಲ್ಲ. ಉತ್ತಮ ಇಳುವರಿ ಪಡೆಯಬಹುದು ಎಂದು ತಿಳಿಸಿದರು.
ಇದೇ ವೇಳೆ ತೋಟಗಾರಿಕೆ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.

ಕೆವಿಕೆ ತೋಟಗಾರಿಕೆ ತಜ್ಞ ಮೋಹನ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ವಿನುತಾ, ಸಹಾಯಕ ನಿರ್ದೇಶಕ ಮಹದೇವ, ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್ ಖಾನ್, ಗ್ರಾಮ ಘಟಕದ ಅಧ್ಯಕ್ಷ ಬಸವರಾಜು, ರೈತ ಮುಖಂಡರಾದ ವೆಂಕಟೇಗೌಡ, ಕಿರಣ್, ರಮೇಶ್, ನಾರಾಯಣ, ಶ್ರೀನಿವಾಸ್, ಮುತ್ತು, ಶಿವರುದ್ರಪ್ಪ ಇದ್ದರು.