ಜಿಲ್ಲೆ

ನೀರು ಸಂಗ್ರಹಕ್ಕೆ ಕೃಷಿಹೊಂಡ ಬಳಸಿ

ತುಮಕೂರು ಡೆಸ್ಕ್

ತಿಪಟೂರು: ಮಳೆನೀರು ಕೊಯ್ಲು ಮಾಡುವ ಜತೆಗೆ ತುಂತುರು ನೀರಾವರಿ ಘಟಕಗಳನ್ನು ನಿರ್ಮಾಣ ಮಾಡಿಕೊಂಡರೆ ಸಂದಿಗ್ದ ಪರಿಸ್ಥಿತಿಯಲ್ಲಿ ರೈತರು ಸಕಾಲಕ್ಕೆ ಬೆಳೆ ರಕ್ಷಿಸಿಕೊಳ್ಳಲು ಉಪಯೋಗಿಸಿಕೊಳ್ಳಬಹುದು ಎಂದು ಶಾಸಕ ಕೆ.ಷಡಕ್ಷರಿ ಅಭಿಪ್ರಾಯಪಟ್ಟರು. ತಾಲೂಕಿನ ಕೃಷಿ ಇಲಾಖೆಯಿಂದ ಶನಿವಾರ ಹೊನ್ನವಳ್ಳಿಯಲ್ಲಿ ಹಮ್ಮಿಕೊಂಡಿದ್ದ ರೈತರಿಗೆ ತುಂತುರು ನೀರಾವರಿ ಘಟಕ, ಕೃಷಿ ಯಂತ್ರೋಪಕರಣ ಮತ್ತು ಮಣ್ಣು ಆರೋಗ್ಯ ಚೀಟಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಒಣಭೂಮಿ ಪ್ರದೇಶ ಹೊಂದಿರುವ ಎರಡನೇ ಕರ್ನಾಟಕ. ಜನಸಂಖ್ಯೆ ಹೆಚ್ಚಾದಂತೆ ಕೃಷಿ ಮಾಡಲು ಅಗತ್ಯವಾದ ಜಾಗ ಕಡಿಮೆಯಾಗುತ್ತಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.

ಬೆಳೆ ಹಂಗಾಮಿನಲ್ಲಿ ಮಧ್ಯಮ ಶ್ರೇಣಿಯ ತೇವಾಂಶ ಕೊರತೆ ಹೆಚ್ಚಾಗುತ್ತಿದೆ. ಮಳೆಯಾಶ್ರಿತ ಬೆಳೆಯನ್ನು ಸುಸ್ಥಿರ ಕೃಷಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಕೃಷಿಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ. ಮಳೆ ನೀರು ವ್ಯರ್ಥಮಾಡದಂತೆ ಸೂಕ್ತ ಸ್ಥಳಗಳಲ್ಲಿ ಕೃಷಿಹೊಂಡ ತೆಗೆದು ನೀರು ಸಂಗ್ರಹಿಸಲು ಮುಂದಾಗಬೇಕು. ಇದು ಬೆಳೆಗಳಿಗೆ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಎಲ್ಲ ವರ್ಗದ ರೈತರು ಈ ಯೋಜನೆಯ ಉಪಯೋಗ ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಜತೆಗೆ ದೇಶದ ಪ್ರಗತಿಗೆ ಸಹಕರಿಸಿ ಎಂದರು.


ಸಹಾಯಕ ಕೃಷಿ ನಿರ್ದೇಶಕ ಡಾ.ಎಂ.ಪಿ.ಪವನ್​ ಮಾತನಾಡಿ, ಕೃಷಿಭಾಗ್ಯ ಯೋಜನೆಯು ಮಳೆಯಾಶ್ರಿತ ಪ್ರದೇಶಗಳಲ್ಲಿ ಮಳೆ ನೀರಿನ ಸಮರ್ಪಕ ಸಂಗ್ರಹಣೆ ಜತೆಗೆ ಬೆಳೆಗಳಿಗೆ ನ್ಯಾಯಯುತವಾಗಿ ನೀರು ಒದಗಿಸಲು ಸಹಕಾರಿಯಾಗಿದೆ. ಈ ಯೋಜನೆಯು ಪ್ಯಾಕೇಜ್​ ಯೋಜನೆಯಾಗಿದ್ದು, ಆರು ಕಡ್ಡಾಯ ಘಟಕಗಳನ್ನು ರೈತರಿಗೆ ಸಹಾಯಧನದಲ್ಲಿ ನೀಡಲಾಗುತ್ತದೆ. ಬದು ನಿಮಾರ್ಣ, ಕೃಷಿಹೊಂಡ, ನೀರು ಇಂಗದಂತೆ ತಡೆಯಲು ಪಾಲಿಥಿನ್​ ಹೊದಿಕೆ, ಕೃಷಿಹೊಂಡದ ಸುತ್ತಲೂ ತಂತಿ ಬೇಲಿ, ಡೀಸೆಲ್​ ಪಂಪ್​ಸೆಟ್​ ಮತ್ತು ಬೆಳೆಗಳಿಗೆ ಹಾಯಿಸಲು ತುಂತುರು ನೀರಾವರಿ ಘಟಕಗಳನ್ನು ಈ ಯೋಜನೆಯಲ್ಲಿ ನೀಡಲಾಗುತ್ತಿದೆ. ಸಾಮಾನ್ಯ ವರ್ಗದ ರೈತರಿಗೆ ಶೇ.80ರಷ್ಟು ಸಹಾಯಧನದಲ್ಲಿ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ಶೇ.90ರ ಸಹಾಯಧನದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.