ಜಿಲ್ಲೆ

ಮಾಧ್ಯಮಗಳಲ್ಲಿ ಉನ್ನತ ತಂತ್ರಜ್ಞಾನ ಬಳಸಿ

Davangere - Desk - Mahesh Babu E

ದಾವಣಗೆರೆ: ಮಾಧ್ಯಮಗಳು ಉನ್ನತ ತಂತ್ರಜ್ಞಾನ ಅಳವಡಿಸಿಕೊಂಡು ಜನರಿಗೆ ಸುದ್ದಿಗಳನ್ನು ತಲುಪಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.

ಜಿಲ್ಲಾ ವರದಿಗಾರರ ಕೂಟದಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾಧ್ಯಮ ದಿನಾಚರಣೆ, ಮಾಧ್ಯಮ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸಕ್ತ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರ ಬಹಳಷ್ಟು ಪ್ರಗತಿ ಸಾಧಿಸಿದೆ. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಮುಖ್ಯ ಎಂದು ಹೇಳಿದರು.

ವರದಿಗಾರರ ಕೂಟವನ್ನು ಉತ್ತಮವಾಗಿ ನಡೆಸಲಾಗುತ್ತಿದ್ದು ಅಗತ್ಯ ವಿಶಾಲ ನಿವೇಶನ ದೊರಕಿಸಲಾಗುವುದು. ಜಿಲ್ಲೆಯಲ್ಲಿ ಬೆಂಗಳೂರು ಮಾದರಿಯಲ್ಲಿ ಪ್ರೆಸ್‌ಕ್ಲಬ್ ಹಾಗೂ ರಿಕ್ರಿಯೇಷನ್ ನಿರ್ಮಾಣ ಮಾಡಬಹುದು ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಪ್ರಸ್ತುತ ತಂತ್ರಜ್ಞಾನದ ವೇಗದ ಬೆಳವಣಿಗೆಯಿಂದ ಮುಂದಿನ ದಿನಗಳಲ್ಲಿ ಪತ್ರಿಕಾ ರಂಗದಲ್ಲಿ ವಿಷಯ ತಜ್ಞರ ಕೈಯಲ್ಲಿ ಕೆಲಸ ನಿರ್ವಹಿಸುವ ಸಾಧ್ಯತೆಯಿದೆ ಎಂದು ಹೇಳಿದರು.

ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುವ ಪತ್ರಕರ್ತರಿಗೆ ಸೇವಾ ಭದ್ರತೆ ಇರುವುದಿಲ್ಲ. ಸದಾ ಸಾಮಾಜಿಕ ಹಿತಚಿಂತನೆಯಲ್ಲಿ ತೊಡಗಿರುವ ಪತ್ರಕರ್ತರಿಗೆ ಸರ್ಕಾರದಿಂದ ಪಿಂಚಣಿ ಸೇರಿ ಅಗತ್ಯ ಸೌಲಭ್ಯ ಒದಗಿಸಬೇಕಾಗಿದೆ ಎಂದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪತ್ರಕರ್ತರ ಭವನಗಳಿವೆ. ದಾವಣಗೆರೆ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದರೆ ಪತ್ರಕರ್ತರ ಸುಸಜ್ಜಿತ ಭವನ ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜದ ನೈಜ ಸ್ವರೂಪ ತೋರಿಸುವ ಶಕ್ತಿ ಪತ್ರಕರ್ತರಿಗಿದೆ. ಖಡ್ಗಕ್ಕಿಂತ ಲೇಖನಿ ಹರಿತ ಎಂಬಂತೆ ಲೇಖನಿಯನ್ನು ಆಯುಧವಾಗಿ ಬಳಸಿಕೊಂಡು ಸಮಾಜ ಎಚ್ಚರಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿ, ವೇಗದ ಜಗತ್ತಿನಲ್ಲಿ ತ್ವರಿತ ಸುದ್ದಿ ಕೊಡುವ ಧಾವಂತದಲ್ಲಿ ಪತ್ರಕರ್ತರು ಒತ್ತಡದಿಂದ ಖಿನ್ನತೆಗೆ ಒಳಗಾಗುತ್ತಿದ್ದು ತಮ್ಮ ಆರೋಗ್ಯದತ್ತ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ವಿವಿ ಪತ್ರಿಕೋದ್ಯಮ ಮತ್ತು ಸಂವಹನ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಶಿವಕುಮಾರ್ ಕಣಸೋಗಿ, ಕೂಟದ ಮಾಜಿ ಅಧ್ಯಕ್ಷರಾದ ಬಿ.ಎನ್. ಮಲ್ಲೇಶ್, ಬಸವರಾಜ್ ದೊಡ್ಮನಿ, ವಾರ್ತಾ ಇಲಾಖೆ ಉಪನಿರ್ದೇಶಕ ಧನಂಜಯ್ ಇತರರು ಇದ್ದರು.

ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ. ನವೀನ್, ಪತ್ರಕರ್ತರಾದ ಮಲ್ಲಿಕಾರ್ಜುನ್ ಕಬ್ಬೂರು, ಸದಾನಂದ ಹೆಗಡೆ, ಎಂ.ವೈ. ಸತೀಶ್, ಆರ್. ರವಿ, ಎಸ್.ವಿ. ಶ್ರೀನಿವಾಸ್, ಕಿರಣ್‌ಕುಮಾರ್, ಎ.ಸಿ. ಸಂಜಯ್, ರಾಮ್‌ಪ್ರಸಾದ್ ಅವರಿಗೆ ಮಾಧ್ಯಮ ಪ್ರಶಸ್ತಿ ನೀಡುವ ಮೂಲಕ ಸನ್ಮಾನಿಸಲಾಯಿತು.

ರುದ್ರಾಕ್ಷಿಬಾಯಿ ಪ್ರಾರ್ಥಿಸಿದರು. ವರದಿಗಾರರ ಕೂಟದ ಖಜಾಂಚಿ ಮಧು ನಾಗರಾಜ್ ಕುಂದುವಾಡ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಾ.ಸಿ.ವರದರಾಜ್ ಪ್ರಾಸ್ತಾವಿಕ ಮಾತನಾಡಿದರು.