ಕಂಪ್ಲಿಯಲ್ಲಿ ಆಯೋಜಿಸಿದ್ದ ಕೃಷಿ ಪಂಪ್‌ಸೆಟ್, ಜಲಸಂರಕ್ಷಣೆ ಕುರಿತ ಜಾಗೃತಿ ಕಾರ್ಯಕ್ರಮಕ್ಕೆ ಕೃಷಿ ಇಲಾಖೆ ಉಪ ನಿರ್ದೇಶಕ ಎಸ್.ಎನ್.ಮಂಜುನಾಥ ಚಾಲನೆ ನೀಡಿದರು. ಪ್ರಮುಖರಾದ ಡಾ.ಸಿ.ಆರ್.ಅಭಿಲಾಷ, ವಿದ್ಯಾವತಿ ಹೊಸಮನಿ, ದೊಡ್ಡ ಬಸಪ್ಪ, ಸರಸ್ವತಿ ಇತರರಿದ್ದರು. 
ಜಿಲ್ಲೆ

ಕಡಿಮೆ ವಿದ್ಯುತ್ ಬಳಕೆ ಮಾದರಿ ದಕ್ಷ ಯಂತ್ರ ಬಳಸಿ

ಕಂಪ್ಲಿ: ಕೃಷಿಯಲ್ಲಿ ಬಿಇಇ ಸ್ಟಾರ್ ಲೇಬಲ್ ಇರುವ ಪಂಪ್‌ಸೆಟ್‌ಗಳ ಬಳಕೆಯಿಂದ ವಿದ್ಯುತ್ ಉಳಿತಾಯ ಸಾಧ್ಯ ಎಂದು ಬಳ್ಳಾರಿ ಕೃಷಿ ಇಲಾಖೆ ಉಪ ನಿರ್ದೇಶಕ ಎಸ್.ಎನ್.ಮಂಜುನಾಥ ಹೇಳಿದರು.

ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ (ಬಿಇಇ) ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆ.ಆರ್.ಇ.ಡಿ.ಎಲ್) ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕೃಷಿ ಪಂಪ್‌ಸೆಟ್, ಜಲಸಂರಕ್ಷಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರು ವಿದ್ಯುಚ್ಛಕ್ತಿಯನ್ನು ಅವಲಂಭಿಸದೆ ಸೌರ, ಜೈವಿಕ ಸೇರಿದಂತೆ ಪರ್ಯಾಯ ಶಕ್ತಿಗಳನ್ನು ಬಳಸಿಕೊಳ್ಳುವಲ್ಲಿ ಜಾಗೃತಿ ತೋರಬೇಕು. ಸರ್ಕಾರ ಸೂಚಿಸಿದ ಕಡಿಮೆ ವಿದ್ಯುತ್ ಬಳಕೆ ಮಾದರಿ ದಕ್ಷ ಯಂತ್ರ ಬಳಸಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕಿ ಡಾ.ಸಿ.ಆರ್.ಅಭಿಲಾಷ ಮಾತನಾಡಿ, ರೈತರು ಶೂನ್ಯ ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ ಕೃಷಿ, ತೋಟಗಾರಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕಂಪ್ಲಿಯ ಜೆಸ್ಕಾಂ ಎಇಇ ಮಲ್ಲಿಕಾರ್ಜುನಗೌಡ ಇಂಧನ ಸಂರಕ್ಷಣಾ ಕಾಯ್ದೆ, ಪಂಪ್‌ಸೆಟ್‌ಗಳ ಗುಣಮಟ್ಟ ಕಾಯ್ದುಕೊಳ್ಳುವಿಕೆ, ಗಂಗಾವತಿಯ ಸಹಾಯಕ ಪ್ರಾಧ್ಯಾಪಕ ಡಾ.ಆರ್.ಬದರಿಪ್ರಸಾದ್ ಜಲಸಂರಕ್ಷಣೆ, ಬಳ್ಳಾರಿಯ ಕೊರ್ಲಗುಂದಿ ಗುರುಪ್ರಸಾದ್ ಬಿಇಇ ಸ್ಟಾರ್ ಲೇಬಲ್ ಹೊಂದಿರುವ ಕೃಷಿ ಪಂಪ್‌ಸೆಟ್ ಬಳಕೆ ಕುರಿತು ಉಪನ್ಯಾಸ ನೀಡಿದರು.

ಸಹಾಯಕ ಕೃಷಿ ನಿರ್ದೇಶಕಿ ವಿದ್ಯಾವತಿ ಹೊಸಮನಿ, ಕೃಷಿ ಅಧಿಕಾರಿಗಳಾದ ನವ್ಯ ಪ್ರಶಾಂತ್, ಏಸುಬಾಬು, ಶಿವಪ್ಪ ಬಾರಿಗಿಡದ, ರೈತರಾದ ದೊಡ್ಡಬಸಪ್ಪ, ಜೆ.ರುದ್ರಪ್ಪ, ಸರಸ್ವತಿ, ಮಂಜುಗೌಡ, ಹಂದಿಹಾಳ್ ನಿಂಗಪ್ಪ ಇತರರಿದ್ದರು.