ಉರ್ವಸ್ಟೋರ್ ಮಾರುಕಟ್ಟೆಯೊಳಗೆ ಮದ್ಯ ಸೇವಿಸಿ ಬಿಸಾಕಿದ ಟೆಟ್ರಾ ಪ್ಯಾಕ್‌ಗಳು ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ರಾಶಿ.
ಮಂಗಳೂರು ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾದ ದೇರೆಬೈಲ್ ಮಾರುಕಟ್ಟೆ ಉರ್ವಾಸ್ಟೋರ್ ಸಂಪೂರ್ಣ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಪ್ರತಿನಿತ್ಯ ಸಾವಿರಾರು ಗ್ರಾಹಕರು ಮತ್ತು ನೂರಾರು ವ್ಯಾಪಾರಿಗಳು ಓಡಾಡುವ ಈ ಮಾರುಕಟ್ಟೆಯಲ್ಲಿ ಮೂಲಭೂತ ಸೌಲಭ್ಯಗಳೇ ಇಲ್ಲದಂತಾಗಿದ್ದು, ಸಾರ್ವಜನಿಕ ಶೌಚಗೃಹ ಸಂಪೂರ್ಣ ಹದಗೆಟ್ಟು ಬಳಕೆಗೆ ಅಸಾಧ್ಯವಾಗಿದೆ.
ಶೌಚಗೃಹದ ಒಳಚರಂಡಿ ನೀರು ಸರಿಯಾಗಿ ಹರಿಯದೆ ಬ್ಲಾಕ್ ಆಗಿರುವುದರಿಂದ ದುರ್ವಾಸನೆ ಆವರಿಸಿದೆ. ಇದರಿಂದ ವ್ಯಾಪಾರಿಗಳು, ಗ್ರಾಹಕರು ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದ್ದು, ಕೊಳಚೆ ನೀರು ಹೊರ ಹರಿದು ಪರಿಸರವನ್ನು ಇನ್ನಷ್ಟು ಮಲಿನಗೊಳಿಸಿದೆ.
ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ
ಮಾರುಕಟ್ಟೆಯ ವಿವಿಧ ಭಾಗಗಳಲ್ಲಿ ಘನ ತ್ಯಾಜ್ಯವನ್ನು ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡದ ಪರಿಣಾಮ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ. ಇದರೊಂದಿಗೆ ರಾತ್ರಿ ವೇಳೆ ಮದ್ಯಪಾನ ಮಾಡುವವರು ಎಸೆದ ಮದ್ಯದ ಪ್ಯಾಕೆಟ್‌ಗಳು, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇತರ ಕಸಗಳು ಮಾರುಕಟ್ಟೆಯಲ್ಲಿ ತುಂಬಿಕೊಂಡಿವೆ. ಇದರಿಂದಾಗಿ ಸೊಳ್ಳೆಗಳು ಹೆಚ್ಚಾಗಿ ಅಲ್ಲಿ ವ್ಯಾಪಾರ ಮಾಡಲು ಸಾಧ್ಯವಾಗದ ಸ್ಥಿತಿ ಇದೆ.
ವ್ಯಾಪಾರಿಗಳ ಗೋಳು ಕೇಳುವವರಿಲ್ಲ
ಹಲವು ಬಾರಿ ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ಸಮಸ್ಯೆಯನ್ನು ತಂದಿದ್ದೇವೆ. ಮನವಿಗಳನ್ನೂ ಸಲ್ಲಿಸಿದ್ದೇವೆ. ಆದರೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳಲಾಗಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಷ್ಟೇ ಮಾಡುತ್ತಾರೆ. ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾರುಕಟ್ಟೆ ಶುಚಿ ಇಲ್ಲದ ಕಾರಣ ಗ್ರಾಹಕರು ಮಾರುಕಟ್ಟೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ದುರ್ವಾಸನೆ, ಕಸದ ರಾಶಿ ಹಾಗೂ ಬಳಕೆಗೆ ಯೋಗ್ಯವಲ್ಲದ ಶೌಚಗೃಹದಿಂದ ಮಹಿಳೆಯರು, ಹಿರಿಯ ನಾಗರಿಕರು ಮತ್ತು ಹೊರ ಊರಿನಿಂದ ಬರುವ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ತ್ಯಾಜ್ಯವನ್ನು ತೆರವುಗೊಳಿಸದ ಪರಿಣಾಮ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಆತಂಕವೂ ಎದುರಾಗಿದೆ. ಈಗಾಗಲೇ ಹಲವು ಮಂದಿ ಜ್ವರ ಬಾಧಿತರಾಗಿದ್ದಾರೆ. ಸದ್ಯ ಇಲ್ಲಿಗೆ ಬರುತ್ತಿರುವ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಅಲ್ಲಿನ ವ್ಯಾಪಾರಿಗಳು ತಿಳಿಸಿದ್ದಾರೆ.
ನಗರದ ಪ್ರಮುಖ ಮಾರುಕಟ್ಟೆಯ ಈ ದುಸ್ಥಿತಿ ಮಹಾನಗರ ಪಾಲಿಕೆಯ ನಿರ್ಲಕ್ಷೃಕ್ಕೆ ಸಾಕ್ಷಿಯಾಗಿದೆ. ಶೌಚಗೃಹದ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ ಒದಗಿಸುವುದು, ತ್ಯಾಜ್ಯ ವಿಲೇವಾರಿ, ನಿರಂತರ ಸ್ವಚ್ಛತೆ ಹಾಗೂ ರಾತ್ರಿ ವೇಳೆಯ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಉರ್ವಸ್ಟೋರ್ ಮಾರುಕಟ್ಟೆ ಸ್ಮಾರ್ಟ್‌ಸಿಟಿ ಮಂಗಳೂರಿಗೆ ಕಪ್ಪು ಚುಕ್ಕೆ. ನಗರದ ಹಲವಾರು ಕಡೆ ಜನರ ತೆರಿಗೆ ಹಣದಲ್ಲಿ ಕೋಟ್ಯಂತರ ರೂ. ವ್ಯಯಿಸಿ ಮಾರುಕಟ್ಟೆ ನಿರ್ಮಾಣ ಮಾಡಿರುವುದು ವ್ಯಾಪಾರಿಗಳಿಲ್ಲದೆ ಭೂತ ಬಂಗಲೆಗಳಾಗುತ್ತಿವೆ. ಆದರೆ ಅಗತ್ಯ ಇರುವಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡಿಲ್ಲ. ಇರುವುದನ್ನು ನಿರ್ವಹಣೆಯೂ ಮಾಡುತ್ತಿಲ್ಲ.