ಬಾಳೆಹೊನ್ನೂರು: ಗೋರಿಗಂಡಿ ಹಜ್ರತ್ ಖ್ವಾಜಾ ಅಸಾಬುನ್ನಬಿ ದರ್ಗಾ ಶರೀಫ್‌ನ ವಾರ್ಷಿಕ ಉರುಸ್ ಮುಬಾರಕ್ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಉರುಸ್ ಮುಬಾರಕ್ ಅಂಗವಾಗಿ ನೂರಾರು ಮುಸಲ್ಮಾನರು ಜೇನುಗದ್ದೆ ಮಸೀದಿಯಿಂದ ಮುರ್ಶದ್‌ಗಳ ದಾಯಿರ ಹಾಗೂ ದಫ್‌ನೊಂದಿಗೆ ಮೆರವಣಿಗೆ ಹೊರಟು ಗೋರಿಗಂಡಿಗೆ ತಲುಪಿ ದರ್ಗಾ ಶರೀಫ್‌ಗೆ ಸಂದಲ್, ಚಾದರ್, ಹೂ ಅರ್ಪಣೆ ಮತ್ತು ದುವಾ ಝಿಯಾರತ್ ಮಾಡಲಾಯಿತು.
ಉರುಸ್ ಮುಬಾರಕ್‌ನ ಸಮಾರೋಪ ಸಮಾರಂಭದಲ್ಲಿ ಸುನ್ನೀ ಯುವಜನ ಸಂಘದ ಸಂಘಟನಾ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದಿಕ್ ಮೋಂಟುಗೋಳಿ, ಬೆಂಗಳೂರು ಗರೀಬ್ ನವಾಜ್ ಖತೀಬ್ ಅಜ್ಮತುಲ್ಲಾ ಖಾನ್ ರಜ್ವಿ ಮುಖ್ಯ ಭಾಷಣ ಮಾಡಿದರು. ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಮಹಮ್ಮದ್ ಶಾಹಿದ್ ರಜ್ವಿ, ಅಸಾಬುನ್ನಬಿ ದರ್ಗಾ ಶರೀಫ್ ಸೇವಾ ಸಮಿತಿ ಅಧ್ಯಕ್ಷ ಶಬ್ಬೀರ್ ಅಹ್ಮದ್ ಖಾನ್, ಪ್ರಧಾನ ಕಾರ್ಯದರ್ಶಿ ಏಹ್ತೆಶಾಮ್ ಎಸ್.ಪೇಟೆ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು. ಉರುಸ್ ಮುಬಾರಕ್ ಅಂಗವಾಗಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಗೋರಿಗಂಡಿಯ ಮುಖ್ಯರಸ್ತೆಯಲ್ಲಿ ವಿವಿಧ ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ವಹಿವಾಟು ನಡೆಸಿದವು. ದರ್ಗಾ ಶರೀಫ್ ಹಾಗೂ ಗೋರಿಗಂಡಿ ಮಸೀದಿಗೆ ವಿವಿಧ ವಿದ್ಯುತ್ ದೀಪಗಳನ್ನು ಅಲಂಕರಿಸಲಾಗಿತ್ತು.