ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುವ ಅದೆಷ್ಟೋ ಐತಿಹಾಸಿಕ ದರ್ಗಾಗಳಿದ್ದರೂ ಶರೀಯತ್ ಕಾಲೇಜು ನಡೆಸಲ್ಪಡುವ ಏಕೈಕ ದರ್ಗಾ ಉಳ್ಳಾಲದಲ್ಲಿ ಮಾತ್ರ ಇದೆಯೆಂದಾದರೆ ತಾಜುಲ್ ಉಲಮಾ ತಂಙಳ್ ಅವರ ದೂರದೃಷ್ಟಿ ಕಾರಣ ಎಂದು ಉಡುಪಿ ಸಹಾಯಕ ಖಾಝಿ ಮೂಳೂರು ಅಬ್ದುಲ್ ರಹ್ಮಾನ್ ಮದನಿ ಶ್ಲಾಘಿಸಿದರು.
ಉಳ್ಳಾಲ ಖುತ್‌ಬುಝ್ಝಮಾನ್ ಹಝ್ರತ್ ಅಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ತಂಙಳ್ ಹೆಸರಿನಲ್ಲಿ ನಡೆಯುತ್ತಿರುವ 22ನೇ ಪಂಚವಾರ್ಷಿಕ ಉರುಸ್ ಪ್ರಯುಕ್ತ ಶುಕ್ರವಾರ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಉರುಸ್ ಮಾತ್ರವಲ್ಲದೆ ಇತರ ಸಂದರ್ಭದಲ್ಲೂ ಉಳ್ಳಾಲ ದರ್ಗಾಕ್ಕೆ ದೂರದೂರಿನಿಂದ ಮಹಿಳೆಯರ ಸಹಿತ ಸಾಕಷ್ಟು ಮಂದಿ ಬರುತ್ತಿದ್ದರೂ ಅವರು ನಿರ್ಭೀತಿಯಿಂದ ನೆಲೆನಿಲ್ಲಲು ಅವಕಾಶ ಇರುವುದರಿಂದ ಪ್ರತ್ಯೇಕ ವ್ಯವಸ್ಥೆ ಅನಗತ್ಯ, ದರ್ಗಾ ಅಧೀನದಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಆರಂಭದಿಂದ ಪ್ರಸ್ತುತ ಇರುವ ಅಧ್ಯಕ್ಷರು, ಪದಾಧಿಕಾರಿಗಳು ಶ್ರಮ ಶ್ಲಾಘನೀಯ ಎಂದರು.
ಶಾಕಿರ್ ಬಾಖವಿ ಮಂಬಾಡಿ ಧಾರ್ಮಿಕ ಉಪನ್ಯಾಸ ನೀಡಿದರು. ಉಳ್ಳಾಲ ಕೇಂದ್ರ ಜುಮಾ ಮಸೀದಿ ಮಾಜಿ ಖತೀಬ್ ಅಬ್ದುಲ್ ರವೂಫ್ ಮುಸ್ಲಿಯಾರ್ ದುವಾ ನೆರವೇರಿಸಿದರು. ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಅರೆಬಿಕ್ ಕಾಲೇಜಿನ ಪ್ರೊ.ಇಬ್ರಾಹಿಂ ಅಹ್ಸನಿ, ಎಸ್‌ವೈಎಸ್ ಅಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯ, ಕೆ.ಇ.ರಝ್ವಿ ಉಸ್ತಾದ್, ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್‌ವೇ, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಕಾರ್ಯದರ್ಶಿ ಮುಸ್ತಫಾ ಮದನಿ ನಗರ, ಕೋಟೆಪುರ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್, ಉಪಾಧ್ಯಕ್ಷ ಅಬೂಬಕ್ಕರ್, ಕಾರ್ಯದರ್ಶಿ ಅಶ್ರಫ್, ದರ್ಗಾದ ಮಾಜಿ ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯಿಲ್, ದರ್ಗಾ ಸದಸ್ಯರಾದ ಆಝಾದ್ ಇಸ್ಮಾಯಿಲ್, ಫಾರೂಕ್ ಅಬ್ಬಾಸ್ ಉಳ್ಳಾಲ, ಝೈನುದ್ದೀನ್ ಮೇಲಂಗಡಿ, ಫೈಝಲ್, ಟ್ರಸ್ಟ್ ಸದಸ್ಯ ಖಲೀಲ್ ಮತ್ತಿತರರು ಉಪಸ್ಥಿತರಿದ್ದರು. ದರ್ಗಾದ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.