ಜಿಲ್ಲೆ

ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತು ಸ್ಪಂದಿಸಿ

ಸಿಂಧನೂರು: ನಗರಸಭೆಗೆ ಕೆಲಸಗಳಿಗಾಗಿ ಬರುವ ಜನರ ಅಲೆದಾಟ ತಪ್ಪಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ಹಂಪನಗೌಡ ಬಾದರ್ಲಿ ಸೂಚಿಸಿದರು.

ನಗರಸಭೆ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು. ಕೆಲಸದಲ್ಲಿ ಪ್ರಾಮಾಣಿಕತೆ, ಬದ್ಧತೆ ಮತ್ತು ಸಮಯ ಪಾಲನೆ ಹೊಂದಿರಬೇಕು. ಫಾರ್ಮ್ 3, ವಿವಿಧ ಪರವಾನಗಿ ಹಾಗೂ ಇತರ ಅಗತ್ಯ ದಾಖಲಾತಿಗಳನ್ನು ಪಡೆಯಲು ಜನರು ತೊಂದರೆಪಡಬಾರದು. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಸಾರ್ವಜನಿಕರ ಸಮಸ್ಯೆ ಗಳಿಗೆ ತುರ್ತಾಗಿ ಸ್ಪಂದಿಸಬೇಕು ಎಂದು ತಾಕೀತು ಮಾಡಿದರು.

ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಿಷೇಧಿತ ಪ್ಲಾಸ್ಟಿಕ್ ಬಳಸುವವರಿಗೆ ದಂಡ ವಿಧಿಸಬೇಕು. ಬಿಡಾಡಿ ದನಗಳನ್ನು ನಿಯಂತ್ರಣಕ್ಕೆ ಮುಂದಾಗಬೇಕು. ಅನಧಿಕೃತ ಫ್ಲೆಕ್ಸ್ ಅಳವಡಿಕೆ ತಡೆಗಟ್ಟಿ ಮುನ್ಸಿಪಲ್ ಕಾಯ್ದೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಜಾಹೀರಾತು ಸೇರಿ ವಿವಿಧ ಕರ ವಸೂಲಾತಿ, 15ನೇ ಹಣಕಾಸು ಯೋಜನೆ, ಎಸ್‌ಎಫ್‌ಸಿ, ಕುಡಿಯುವ ನೀರು, ನಗರೋತ್ಥಾನ 3 ಮತ್ತು 4 ನೇ ಹಂತ, ಎಸ್‌ಡಬ್ಲ್ಯುಎಂ, ಎಸ್‌ಬಿಎಂ, ವಿವಿಧ ವಸತಿ ಯೋಜನೆಗಳ ಕಾಮಗಾರಿ ಶೀಘ್ರ ಮುಗಿಸಬೇಕೆಂದರು.

ಯುಜಿಡಿ ಕಾಮಗಾರಿಯನ್ನು ಮರುಪರಿಶೀಲನೆಗೆ ಒಳಪಡಿಸಲಾಗಿದ್ದು, ಪೂರ್ಣಗೊಳಿಸುವ ಜವಾಬ್ದಾರಿ ನಗರಸಭೆ ಅಧಿಕಾರಿಗಳದ್ದಾಗಿದೆ. ನಗರದ ಅಭಿವೃದ್ಧಿಗಾಗಿ ವಿಶೇಷ ಅನುದಾನ ತರಲಾಗುವುದು. ನಗರದ ಎಲ್ಲ ವಾರ್ಡ್‌ಗಳ ರಸ್ತೆ, ಚರಂಡಿ, ವಿದ್ಯುತ್, ಪಾರ್ಕ್‌ಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಶಾಸಕ ಬಾದರ್ಲಿ ತಿಳಿಸಿದರು.

ಪೌರಾಯುಕ್ತ ಮಂಜುನಾಥ ಗುಂಡೂರು, ನಗರ ಯೋಜನಾ ಪ್ರಾಧಿಕಾರದ ಕಾರ್ಯದರ್ಶಿ ಶರಣಪ್ಪ, ಇಂಜಿನಿಯರ್‌ಗಳಾದ ಮನ್ಸೂರ್ ಅಲಿ, ಶಾಂತಕುಮಾರ, ಅಧಿಕಾರಿಗಳಾದ ದುರ್ಗಪ್ಪ, ಮಾಧುರಿ, ಅಬ್ದುಲ್ ಇದ್ದರು.