ಮೇಲುಕೋಟೆಯಲ್ಲಿ ಮಂಗಳವಾರ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ನಾಡ ಕಚೇರಿ ಕಟ್ಟಡ ಉದ್ಘಾಟಿಸಿದರು. ಶ್ರೀನಿವಾಸ್, ಸಂತೋಷ್, ಎಚ್.ತ್ಯಾಗರಾಜು, ಭಾಗ್ಯಮ್ಮ ಇತರರು ಇದ್ದರು. 
ಜಿಲ್ಲೆ

ಜಮೀನು ವ್ಯಾಜ್ಯಗಳು ತುರ್ತು ವಿಲೇವಾರಿ

 ಮೇಲುಕೋಟೆ: ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ತಹಸೀಲ್ದಾರ್ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಜಮೀನು ವ್ಯಾಜ್ಯಗಳಿಗೆ ಸಂಬಂಧಿಸಿದ ಹಳೇ ಪ್ರಕರಣಗಳನ್ನು ತುರ್ತಾಗಿ ವಿಲೇವಾರಿ ಮಾಡುವಂತೆ ನಮ್ಮ ಸರ್ಕಾರ ಸೂಚನೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಮೇಲುಕೋಟೆಯಲ್ಲಿ ಮಂಗಳವಾರ ಶಾಸಕ ದರ್ಶನ್ ಪುಟ್ಟಣ್ಣಯ್ಯರೊಂದಿಗೆ ನೂತನ ನಾಡ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಬಾಕಿ ಇದ್ದ ಹತ್ತು ಸಾವಿರ ಪ್ರಕರಣಗಳನ್ನು ಒಂದೇ ವರ್ಷದಲ್ಲಿ ಇತ್ಯರ್ಥಗೊಳಿಸಲಾಗಿದೆ. ರಾಜ್ಯಾದ್ಯಂತ ಈ ಆಂದೋಲನ ಮುಂದುವರೆಯುತ್ತದೆ. ನಮ್ಮ ಸರ್ಕಾರ ರೈತಪರ ಸರ್ಕಾರ. ರೈತರ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ಹಿಂದೆ ಜಿಲ್ಲೆಯಲ್ಲಿ ಜಮೀನು ಸರ್ವೇಗೆ ಸಂಬಂಧಿಸಿದಂತೆ ವರ್ಷಕ್ಕೆ ನೂರು ‘1-5(ಒನ್ ಟು ಫೈ )’ ಸೇವೆ ನೀಡುವುದು ಕಷ್ಟವಾಗಿತ್ತು. ಆದರೆ ಕಂದಾಯ ಇಲಾಖೆ ಸಚಿವರು ಮತ್ತು ಜಿಲ್ಲಾಡಳಿತದ ಸಹಕಾರದಿಂದ ಒಂದೇ ವಾರದಲ್ಲಿ 270ಕ್ಕೂ ಹೆಚ್ಚು ಒನ್ ಟು ಫೈ ಇತ್ಯರ್ಥ ಮಾಡಿ ಸ್ಕೆಚ್ ಪೋಡಿ ಆಕಾರಬಂದ್ ಎಲ್ಲವನ್ನೂ ಒಂದೇ ದಾಖಲೆಯಲ್ಲಿ ನೀಡುತ್ತಿದ್ದೇವೆ. ಜಿಲ್ಲೆಯ ಜನತೆ ಸರ್ಕಾರದೊಂದಿಗೆ ಸಹಕರಿಸಿದರೆ ಜಿಲ್ಲೆಯ ಅಭಿವೃದ್ಧಿ ಜತೆಗೆ ರೈತರ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ವೇಗವಾಗಿ ನಡೆಯುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಈ ಹಿಂದೆಯೇ ನಿರ್ಮಾಣಗೊಂಡ ನಾಡ ಕಚೇರಿಯನ್ನು ಉದ್ಘಾಟಿಸಲಾಗಿದೆ. ಮೇಲುಕೋಟೆಯ ಸುತ್ತಮುತ್ತಲಿನ ಗ್ರಾಮಸ್ಥರು, ರೈತರು ತಮ್ಮ ದಾಖಲೆ ಹಾಗೂ ಕಂದಾಯ ಸೇವೆಗಳಿಗಾಗಿ ಪಾಂಡವಪುರಕ್ಕೆ ಹೋಗುವ ಅವಶ್ಯಕತೆ ಇಲ್ಲ. ಇನ್ನೂ ಮುಂದಿನ ದಿನಗಳಲ್ಲಿ ಎಲ್ಲ ಗ್ರಾಮ ಸೇವೆಗಳನ್ನು ನಾಡ ಕಚೇರಿ ಮೂಲಕ ಪಡೆದುಕೊಳ್ಳಬಹುದು. ರೈತರು ಏನೇ ಸಮಸ್ಯೆ ಬಂದರೂ ತಮ್ಮನ್ನು ಸಂಪರ್ಕಿಸಬಹುದು. ಅಧಿಕಾರಿಗಳು ರೈತರ ಸಂಕಷ್ಟಕ್ಕೆ ಸ್ಪಂದಿಸಿ ಕರ್ತವ್ಯನಿರ್ವಹಿಸಬೇಕು ನಿರ್ದೇಶನ ನೀಡಿದರು.

ಉಪವಿಭಾಗಾಧಿಕಾರಿ ಶ್ರೀನಿವಾಸ್, ಪಾಂಡವಪುರ ತಹಸೀಲ್ದಾರ್ ಸಂತೋಷ್, ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು, ಗ್ರಾ.ಪಂ ಸದಸ್ಯೆ ಭಾಗ್ಯಮ್ಮ, ರಾಮಚಂದ್ರು ಇದ್ದರು.