ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲಗೆ ಯುವ ಭಾರತ ವೇದಿಕೆ ವದಾಧಿಕಾರಿಗಳು ಮನವಿ ಸಲ್ಲಿಸಿದರು. ಉಮೇಶ ಕಾರಜೋಳ, ಬಸವರಾಜ ಯಾದವಾಡ ಮತ್ತಿತರರಿದ್ದಾರೆ. 
ಜಿಲ್ಲೆ

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪಿಸಲು ಯುವ ಭಾರತ ವೇದಿಕೆಯಿಂದ ಒತ್ತಾಯ

ವಿಜಯಪುರ : ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ಒತ್ತಾಯಿಸಿ ಯುವ ಭಾರತ ವೇದಿಕೆ ಪದಾಧಿಕಾರಿಗಳು ಶನಿವಾರ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ ಅವರಿಗೆ ಮನವಿ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ಮಾತನಾಡಿ, ಈ ಭಾಗದಲ್ಲಿ ಅನೇಕ ಮಹಿಳೆಯರು ಸ್ವಾತಂತ್ರ್ಯವೀರ ವೀರ ಸಾವರ್ಕರ್ ಬಗ್ಗೆ ಉನ್ನತ ಸಂಶೋಧನೆ ಮಾಡಲು ಆಸಕ್ತಿ ಹೊಂದಿದ್ದಾರೆ. ಹೀಗಾಗಿ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಿದರೆ ಅವರ ಕುರಿತಾದ ಇನ್ನೂ ಹಲವಾರು ಸಾಮಾಜಿಕ ಕೊಡುಗೆ, ದೇಶಕ್ಕಾಗಿ ನೀಡಿದ ಕೊಡುಗೆಗಳು ಜನತೆಗೆ ತಿಳಿಯಬಹುದಾಗಿದೆ ಎಂದರು.

ಪೀಠ ಸ್ಥಾಪನೆಗೆ ಅವಶ್ಯವಿರುವ ಹಣವನ್ನು ಸಮಾಜದಲ್ಲಿ ಸಂಗ್ರಹಿಸಿ ಸಹ ನೀಡುವ ಮಹತ್ವದ ಕಾರ್ಯ ಮಾಡಲಾಗುವುದು ಎಂದು ವಿವರಿಸಿದರು. ನ್ಯಾಯವಾದಿ ಬಸವರಾಜ ಯಾದವಾಡ, ವಿರೇಶ ಗೊಬ್ಬೂರ, ಗಿರೀಶ ಕುಲಕರ್ಣಿ, ಸಂಗಮೇಶ ಸಗರ, ಸತೀಶ ಪಾಟೀಲ ಮತ್ತಿತರರಿದ್ದರು.