ಶಿವಮೊಗ್ಗ: ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ಆದರೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾ ನಗರ ಘಟಕದ ಪ್ರಮುಖರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ. ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಗಳು ನಡೆಯುತ್ತಿವೆ. ಕೊಲೆ, ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿವೆ ಎಂದು ದೂರಿದರು.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಘಟನೆ, ಮಡಿಕೇರಿಯಲ್ಲಿ ಮೀನಾ ಹತ್ಯೆ, ಅಂಜಲಿಯ ಕೊಲೆ, ಕಾರ್ಕಳದ ಬಳಿ ಸಾಮೂಹಿಕ ಅತ್ಯಾಚಾರ, 5 ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಘಟನೆ ನಡೆದಿರುವುದು ಇಡೀ ಸಮಾಜ ತಲೆತಗ್ಗಿಸುವಂಥದ್ದು. ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮಹಿಳಾ ಘಟಕದ ನಗರಾಧ್ಯಕ್ಷೆ ರಶ್ಮಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಯಶೋಧಾ, ಸುರೇಖಾ ಮುರಳೀಧರ್, ನಿರ್ಮಲಾ, ಗೌರಿ ಶ್ರೀನಾಥ್, ಚೈತ್ರಾ, ರುದ್ರಾಂಬೆ, ರೂಪಾ, ದೀಪಾ, ಗೀತಾ, ಮೀನಾಕ್ಷಮ್ಮ, ಸುಶೀಲಕ್ಕ, ರತ್ನಮ್ಮ ಇತರರಿದ್ದರು.