ಮಂಡ್ಯ: ಯೂರಿಯಾ ರಸಗೊಬ್ಬರದ ಅಕ್ರಮ ದಾಸ್ತಾನು ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಬಳಸುತ್ತಿರುವುದಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನಲ್ಲಿ ಒಟ್ಟು 6 ಪ್ರಕರಣಗಳು ವರದಿಯಾಗಿದೆ. ಅಂತೆಯೇ 5.46 ಲಕ್ಷ ರೂ ಮೌಲ್ಯದ 92.53 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರವನ್ನು ಜಫ್ತಿ ಮಾಡಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಎಂಎಲ್‌ಸಿ ಮಧು ಜಿ.ಮಾದೇಗೌಡ ವಿಧಾನ ಪರಿಷತ್‌ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, ಹಾಸನ ಮತ್ತು ತುಮಕೂರು ಜಿಲ್ಲೆಯಲ್ಲಿ ತಲಾ 2, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ಕಂಡುಬಂದಿದೆ. ಇದಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕಳೆದ ಮೂರು ವರ್ಷದಲ್ಲಿ ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ಸಾಗಿಸಿದ ಒಟ್ಟು 21 ಪ್ರಕರಣದಲ್ಲಿ 27.34 ಲಕ್ಷ ರೂ ಮೌಲ್ಯದ 462.66 ಮೆ.ಟನ್ ಯೂರಿಯಾ ರಸಗೊಬ್ಬರವನ್ನು ಜಫ್ತು ಮಾಡಲಾಗಿದೆ ಎಂದಿದ್ದಾರೆ.
ಅಕ್ರಮ ತಡೆಗೆ ಜಾರಿ ದಳ: ಸಹಾಯಧನದ ಯೂರಿಯಾ ರಸಗೊಬ್ಬರವನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆಯಾಗದಂತೆ ತಡೆಯಲು ಮತ್ತು ರಸಗೊಬ್ಬರ(ನಿಯಂತ್ರಣ) ಆದೇಶ 1985ರ ಉಲ್ಲಂಘನೆ ಸಂಬಂಧ ಕ್ರಮ ಕೈಗೊಳ್ಳಲು ರಾಜ್ಯದಲ್ಲಿ ರಸಗೊಬ್ಬರ ಪರಿವೀಕ್ಷಕರನ್ನು ಅಧಿಸೂಚಿಸಲಾಗಿದೆ. ಅಂತೆಯೇ ಅಪರ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ಜಾಗೃತ ಕೋಶ ರಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಕೃಷಿ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ ಎಂದು ವಿವರಿಸಿದ್ದಾರೆ.
ಅಂತೆಯೇ ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ಕಳಪೆ ಬಿತ್ತನೆ ಬೀಜಕ್ಕೆ ಸಂಬಂಧಿಸಿದಂತೆ 116 ದೂರು ಹಾಗೂ ಕಳಪೆ ರಸಗೊಬ್ಬರ ಮಾರಾಟ ಸಂಬಂಧಿಸಿದಂತೆ 73 ದೂರು ಸ್ವೀಕೃತವಾಗಿವೆ. ಕಳಪೆ ಬಿತ್ತನೆ ಬೀಜ ಸಂಬಂಧ 16 ಪ್ರಕರಣದಲ್ಲಿ 105.41 ಕ್ವಿಂಟಾಲ್ ಹಾಗೂ ಕಳಪೆ/ನಕಲಿ ರಸಗೊಬ್ಬರ ಮಾರಾಟ ಸಂಬಂಧ 13 ಪ್ರಕರಣದಲ್ಲಿ 63.55 ಮೆ.ಟನ್ ವಿವಿಧ ಗ್ರೇಡ್ ಕಳಪೆ/ನಕಲಿ ರಸಗೊಬ್ಬರ ವಶಪಡಿಸಿಕೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ಧ ಆಯಾಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ರಸಗೊಬ್ಬರದ ಮಾರಾಟಗಾರರು ರಿಯಾಯಿತಿ ದರದ ರಸಗೊಬ್ಬರದ ಜತೆಗೆ ಇತರೆ ಯಾವುದೇ ರಸಗೊಬ್ಬರಗಳು/ ಕೃಷಿ ಪರಿಕರಗಳನ್ನು ಲಿಂಕ್ ಮಾಡಿ ರೈತರಿಗೆ ಮಾರಾಟ ಮಾಡುವಂತಿಲ್ಲ. ಈ ಸಂಬಂಧ ಪ್ರಕರಣಗಳು ಕಂಡು ಬಂದಲ್ಲಿ ಮಾರಾಟಗಾರರ ವಿರುದ್ಧ ರಸಗೊಬ್ಬರ (ನಿಯಂತ್ರಣ) ಆದೇಶ 1985 ರನ್ವಯ ಕ್ರಮ ಜರುಗಿಸಲಾಗುವುದು ಎಂದು ವಿವರ ನೀಡಿದ್ದಾರೆ.