ಜಿಲ್ಲೆ

ನಿಯತ್ತು ಮರೆತ ರಾಜ್ಯ ಸರ್ಕಾರ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಮತ ಕೊಟ್ಟು ಗೆಲ್ಲಿಸಿದ ಮುಗ್ಧ ಮತದಾರರಿಗೆ ನಿಯತ್ತಾಗಿ ಇರಬೇಕೆಂಬುದನ್ನು ಮರೆತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರು ಹಾಗೂ ಜನ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಬಿಜೆಪಿ ರಾಜ್ಯರೈತ ಮೋರ್ಚಾ ಕಾರ್ಯದರ್ಶಿ ಡಾ.ನವೀನ್ ದೂರಿದರು.

ಯೂರಿಯಾ ರಸಗೊಬ್ಬರ ಕೊರತೆ ಖಂಡಿಸಿ ಬಿಜೆಪಿ ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ರೈತರು ಮಣ್ಣು ತಿನ್ನುವ ಸ್ಥಿತಿಗೆ ತಲುಪಿದ್ದಾರೆ. ರಸಗೊಬ್ಬರಗಳ ಕೃತಕ ಅಭಾವಕ್ಕೆ ಸಿದ್ದರಾಮಯ್ಯ ಸರ್ಕಾರ ಕಾರಣವಾಗಿದೆ ಎಂದರು.

ಗೊಬ್ಬರ ಅಭಾವ ಕುರಿತಂತೆ ಸಿದ್ದರಾಮಯ್ಯ, ಸಚಿವರು ಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯದಲ್ಲಿ 84 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಪೈಕಿ 54 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದ್ದರೂ ಏಕೆ ಅಭಾವ ಎಂದು ತಿಳಿದಿಲ್ಲ ಎಂದರು.

3.50 ಲಕ್ಷ ಟನ್ ಗೊಬ್ಬರ ದಾಸ್ತಾನು, ಕೇಂದ್ರದ 5.50 ಲಕ್ಷ ಟನ್ ಸಹಿತ ರಾಜ್ಯದಲ್ಲಿ 8.50 ಲಕ್ಷ ಟನ್ ರಸಗೊಬ್ಬರ ಇದೆ ಎಂದಿದ್ದ ರಾಜ್ಯ ಸರ್ಕಾರ, ಉಳಿದ ಒಂದೂವರೆ ಲಕ್ಷ ಟನ್ ಗೊಬ್ಬರ ಎಲ್ಲಿ ಹೋಯಿತು ಎಂಬ ಪ್ರಶ್ನೆಗೆ ಉತ್ತರಿಸಬೇಕಿದೆ. ಸರ್ಕಾರ ಮತ್ತು ಕಾಳಸಂತೆ ಕೋರರ ಅನೈತಿಕ ಸಂಬಂಧದಿಂದಾಗಿ, ಗೊಬ್ಬರದ ಕೃತಕ ಅಭಾವ ಉಂಟಾಗಿದೆ. ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳು, ಕಾಂಗ್ರೆಸ್ ಶಾಸಕರು ಉದಾಸೀನತೆ ಪ್ರದರ್ಶಿಸಿದ್ದಾರೆ. ಅಧಿಕಾರಕ್ಕಾಗಿ ಹಲವು ಭಾರಿ ಹೊಸದಿಲ್ಲಿಗೆ ಹೋಗಿರುವ ಸಿಎಂ ಮತ್ತು ಸಚಿವರು, ಗೊಬ್ಬರದ ಸಮಸ್ಯೆ ಕುರಿತಂತೆ ಕೇಂದ್ರದೊಂದಿಗೆ ಚರ್ಚಿಸಿಲ್ಲ. ಗೊಬ್ಬರದ ಅಗತ್ಯವನ್ನರಿತ ಕೇಂದ್ರ ಸರ್ಕಾರ ಏಳು ರಸಗೊಬ್ಬರ ತಯಾರಿಕೆ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಿದೆ ಎಂದು ತಿಳಿಸಿದರು.

ಉಪ ಉತ್ಪನ್ನಗಳಿಗೆ ಯೂರಿಯಾ ಬಳಸುವ ಕೋಲಾರ, ಬೆಂಗಳೂರು ಸುತ್ತ ಮುತ್ತಲಿರುವ ಕಾರ್ಖಾನೆಗಳ ಮೇಲೆ ದಾಳಿ ನಡೆಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ ನವೀನ್, ರೈತರ ವಿಷಯದಲ್ಲಾದರೂ ಭ್ರಷ್ಟಾಚಾರ ಕೈ ಬಿಡಿ ಎಂದು ಕಾಂಗ್ರೆಸ್ಸನ್ನು ಒತ್ತಾಯಿಸಿದರು.

ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ಕಾಂಗ್ರೆಸ್ ರೈತರನ್ನು ನೆಮ್ಮದಿಯಾಗಿರಲು ಬಿಡುತ್ತಿಲ್ಲ. ಒಂದಲ್ಲ ಒಂದು ಸಂಕಷ್ಟಕ್ಕೆ ಅವರನ್ನು ದೂಡುತ್ತಿದೆ. ಕೇಂದ್ರ ಸರ್ಕಾರ ನೀಡಿದ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಕಾಂಗ್ರೆಸ್ ನೆರವಾಗಿದೆ. ಗ್ಯಾರಂಟಿಗಳಿಂದಲೇ ಎಲ್ಲವೂ ಸರಿಯಾಗಿದೆ ಎಂದು ಕಾಂಗ್ರೆಸ್ ಭಾವಿಸದಂತಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರ ಸ್ವಾಮಿ ಮಾತನಾಡಿ, ಗೊಬ್ಬರದ ಅಗತ್ಯತೆ ಕುರಿತಂತೆ ಯೋಜಿಸದೆ ರಾಜ್ಯಸರ್ಕಾರ ರೈತರನ್ನು ಸಂಕಷ್ಟ ಕ್ಕೆ ದೂಡಿರುವುದು ಸರಿಯಲ್ಲ ಎಂದು ದೂರಿದರು. ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್ ಮಾತನಾಡಿದರು.

ನಗರದ ನೀಲಕಂಠೇಶ್ವರ ದೇವಾಲಯದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಡಿಸಿ ಕಚೇರಿಯೊಳಗೆ ಪ್ರ ವೇಶಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ಕೆಲವರನ್ನು ಪೊಲೀಸರು ಹಿಂದಕ್ಕೆ ಕರೆತಂದರು. ಕೃಷಿ ಅಧಿಕಾರಿಗಳು ಸ್ಥಳಕ್ಕಾಗಮಿಸಿದ ಎಡಿಸಿ ಬಿ.ಟಿ.ಕುಮಾರಸ್ವಾಮಿ ಮನವಿ ಸ್ವೀಕರಿಸಿ ಸಮಸ್ಯೆ ಇತ್ಯರ್ಥದ ಭರವಸೆ ನೀಡಿದರು.

ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿಕಾರ್ಜನ್, ಎ.ಮುರಳಿ, ಡಾ.ಸಿದ್ದಾರ್ಥ ಗುಂಡಾರ್ಪಿ, ಮಾಧುರಿ ಗಿರೀಶ್,ಬಾಳೆಕಾಯಿ ರಾಮದಾಸ್, ಲೋಕೇಶ್, ನಾಗರಾಜ್, ಮಲ್ಲೇಶ್, ಕೆ.ಟಿ.ಶ್ರೀರಾಮರೆಡ್ಡಿ, ಸುರೇಶ್ ಮಧುರೆ, ಕಲಂಸೀತಾರಾಮರೆಡ್ಡಿ, ಡಿ.ರಮೇಶ್, ಸೋಮಣ್ಣ, ಸೂರಮ್ಮನಹಳ್ಳಿ ನಾಗರಾಜ್, ಕವನಾ, ಸುಮಾ, ಕವಿತಾ, ರೇಖಾ, ರತ್ಮಮ್ಮ, ಪಾಪೇಶ್‌ನಾಯ್ಕ, ನಾಗರಾಜ ಬೇದ್ರೆ, ಶಂಭು, ಚಂದ್ರು, ಕಿರಣ್, ನವೀನ್ ಚಾಲುಕ್ಯ, ಕಲ್ಲೇಶಯ್ಯ, ಡಿ.ಒ.ಮುರಾರ್ಜಿ ಇದ್ದರು.

ಕೋಟ್

ಹವಾಮಾನ ಇಲಾಖೆ ಉತ್ತಮ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡಿದ್ದರೂ, ಕಾಂಗ್ರೆಸ್ ಸರ್ಕಾರ ಬಿತ್ತನೆ ಕುರಿತಂತೆ ಕಾಳಜಿ ವಹಿಸಲಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಗಮನ ಹರಿಸಲಿಲ್ಲ. ಸಕಾಲಕ್ಕೆ ಯೂರಿಯಾ ನೀಡದಿದ್ದರೆ ಬೆಳೆಗಳು ಹಾಳಾಗುತ್ತವೆ. ಈ ಪ್ರತಿಭಟನೆ ರೈತರ ನೆರವಿಗಾಗಿ.

ಜಿ.ಎಚ್.ತಿಪ್ಪಾರೆಡ್ಡಿ, ಮಾಜಿ ಶಾಸಕ