ಸಿಂಧನೂರು: ರಾಜ್ಯದಲ್ಲಿ ಎದುರಾಗಿರುವ ಯೂರಿಯಾ ಗೊಬ್ಬರದ ಬಿಕ್ಕಟ್ಟು ಕೂಡಲೇ ಸರಿಪಡಿಸದಿದ್ದರೆ ರೈತರೊಂದಿಗೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಅಮಿನ್‌ಪಾಷಾ ದಿದ್ದಗಿ ಹೇಳಿದರು.
ಇದನ್ನೂ ಓದಿ: ಯೂರಿಯಾ ಕೊರತೆ, ರೈತ ಸಂಘದ ಆಕ್ರೋಶ
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರೈತರ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದೆ. ಯೂರಿಯಾ ಗೊಬ್ಬರಕ್ಕಾಗಿ ರೈತರು ಕ್ಯೂ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಮುಂಗಾರು ಮುಂಚಿತವಾಗಿ ಎಡದಂಡೆ ನಾಲೆಗೂ ನೀರು ಹರಿಸಲಾಗಿದೆ. ಆದರೆ, ಬೀಜ, ರಸಗೊಬ್ಬರ ಸಂಗ್ರಹಿಸಿಟ್ಟುಕೊಳ್ಳದಿರುವುದು ನಾಚಿಗೇಡಿತನ ಸಂಗತಿ.
ರಾಜ್ಯದಲ್ಲಿ ಯೂರಿಯಾ ಗೊಬ್ಬರ ಸಮಸ್ಯೆಯಾಗಿದೆ. ಕೃತಕ ಅಭಾವ ಸೃಷ್ಟಿ ಮಾಡಲಾಗಿದೆಂಬುದು ಗೊತ್ತಿಲ್ಲ. ಆದರೆ, ಒಂದು ಚೀಲ ರಸಗೊಬ್ಬರ 280 ರೂ. ಸಿಗಬೇಕಿದ್ದಲ್ಲಿ, ಈಗ ಕಾಳಸಂತೆಯಲ್ಲಿ 400 ರೂ.ಬೆಲೆಗೆ ಯೂರಿಯಾ ಸಿಗುತ್ತಿದೆ. ಇದಕ್ಕೆ ಕಡಿವಾಣ ಹಾಕಿಲ್ಲ ಎಂದು ದೂರಿದರು.
ಜೋಳ ಖರೀದಿಗೂ ವಿಳಂಬ, ಹಣ ಪಾವತಿಗೂ ರೈತರನ್ನು ಸತಾಯಿಸುತ್ತಿರುವ ಸರ್ಕಾರ ಇದ್ದೂ ಇಲ್ಲದಂತಾಗಿದೆ. ಒಂದೂವರೆ ತಿಂಗಳ ಹಿಂದೆಯೇ ಜೋಳ ಖರೀದಿಸಿದ್ದು ಹಣ ಪಾವತಿ ಮಾಡಿಲ್ಲ. ಸರ್ಕಾರದಲ್ಲಿ ಹಣ ಇಲ್ಲದಿದ್ದರೆ ಜೋಳ ಏಕೆ ಖರೀದಿಸಬೇಕಿತ್ತು. ಯೂರಿಯಾ ಸಮಸ್ಯೆ ನಿವಾರಣೆ, ರೈತರಿಗೆ ಜೋಳದ ಹಣ ನೀಡದೆ ಇದ್ದರೆ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಹಂಚಿನಾಳ, ರೈತರಾದ ಚನ್ನನಗೌಡ ಬನ್ನಿಗೆನೂರು, ಬಸವರಾಜ ಬನ್ನಿಗೆನೂರು, ವೀರೇಶ, ಅಣ್ಣಪ್ಪ, ಹುಚ್ಚಪ್ಪ ಬಣ್ಣದ ಇದ್ದರು.