ಮೈಸೂರು: ಅತಿಯಾದ ನಗರೀಕರಣ ಮತ್ತು ಅವೈಜ್ಞಾನಿಕ ಅಭಿವೃದ್ಧಿಯಿಂದಾಗಿ ಪಕ್ಷಿಗಳ ಆವಾಸ ಸ್ಥಾನಕ್ಕೆ ಕುತ್ತು ಬಂದಿದೆ ಎಂದು ನಗರದ ಅಪರೂಪ ವಸ್ತುಗಳ ಘಟಕ(ಆರ್‌ಎಂಪಿ) ವಿಜ್ಞಾನಿ ಗಿರಿ ಚಂದ್ರಶೇಖರ್ ಕಳವಳವ್ಯಕ್ತಪಡಿಸಿದರು.
ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಆವಾಸ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೈಗಾರಿಕಾ ವಲಯ ಸ್ಥಾಪನೆಯಿಂದಾಗಿ ಚಾಮರಾಜನಗರ ಜಿಲ್ಲೆಯ ಬದನಗುಪ್ಪೆ ಗ್ರಾಮದಲ್ಲಿ ಭಾರತೀಯ ಕೋರ್ಸರ್ ಪಕ್ಷಿಯ ಸಂತತಿಯೇ ನಶಿಸಿಹೋಗಿದೆ. ಅಲ್ಲಿದ್ದ ಕೃಷ್ಣಮೃಗ ಸಂತತಿಯೂ ಕಡಿಮೆಯಾಗಿದೆ. ಇದು ಅವೈಜ್ಞಾನಿಕ ಅಭಿವೃದ್ಧಿಯ ದುಷ್ಪರಿಣಾಮವಾಗಿದೆ ಎಂದರು.
ಹೆಬ್ಬಾಳ ಕೆರೆ ಬಾತು ಕೋಳಿ ಸೇರಿದಂತೆ ವಲಸೆ ಪಕ್ಷಿಗಳ ಆವಾಸ ತಾಣವಾಗಿತ್ತು. ಇದೀಗ ಕೇವಲ ವಾಯುವಿಹಾರಗಳ ತಾಣವಾಗಿದೆ. ಅವೈಜ್ಞಾನಿಕವಾಗಿ ಕೆರೆ ಅಭಿವೃದ್ಧಿಪಡಿಸಿದ್ದರಿಂದ ಬಾತುಕೋಳಿಗಳು ಕಾಣಸಿಗುತ್ತಿಲ್ಲ. ಏಷ್ಯಾ ಖಂಡದ ವಿವಿಧ ಭಾಗಗಳಿಂದ ಬರುತ್ತಿದ್ದ ವಲಸೆ ಪಕ್ಷಿಗಳೂ ಗೋಚರವಾಗುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು.
ನಗರದ ಮಧ್ಯಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆಯಲ್ಲೂ ಇದೇ ಸ್ಥಿತಿ. ಇಲ್ಲಿ ಪಕ್ಷಿಗಳ ಸಂಖ್ಯೆ ತೀವ್ರವಾಗಿ ಕುಸಿದಿದೆ. ಹೆಜ್ಜಾರ್ಲೆ(ಪೆಲಿಕಾನ್ಸ್) ಸೇರಿದಂತೆ ಇನ್ನಿತರ ಅಪರೂಪದ ಪಕ್ಷಿಗಳು ಕಣ್ಮರೆಯಾಗಿವೆ. ಅಂದಾಜು 250ರಿಂದ 300 ಪಕ್ಷಿಗಳು ಇಲ್ಲಿದ್ದವು. ಆದರೀಗ ಬೆರಳೆಣಿಕೆಯಷ್ಟು ಪಕ್ಷಿಗಳಿವೆ. ಇದು ಆತಂಕ ಮೂಡಿಸುವ ಸಂಗತಿಯಾಗಿದೆ ಎಂದರು.
ಲಿಂಗಾಂಬುಧಿ ಕೆರೆಯಲ್ಲಿ 276 ಜಾತಿ ಪಕ್ಷಿಗಳು ಕಾಣಸಿಗುತ್ತಿದ್ದವು. ಅದರಲ್ಲಿ ಬಹುತೇಕ ವಲಸೆ ಪಕ್ಷಿಗಳು ಹೆಚ್ಚು ಇದ್ದವು. ಆದರೀಗ ಅಲ್ಲಿ ಕೇವಲ 20ರಿಂದ 30 ಬಗೆಯ ಪಕ್ಷಿಗಳು ವಾಸವಾಗಿವೆ. ಹೀಗೆ ಮುಂದುವರಿದರೆ ಪಕ್ಷಿಗಳ ಸಂತತಿಗೆ ದೊಡ್ಡ ಅಪಾಯ ಎದುರಾಗಲಿದೆ ಎಂದು ಎಚ್ಚರಿಸಿದರು.
ಪಕ್ಷಿಗಳು ಅರಣ್ಯಕ್ಕಿಂತ ಮನುಷ್ಯ ವಾಸ ಸ್ಥಳಗಳ ಆಸುಪಾಸಿನಲ್ಲೇ ಇರುತ್ತವೆ. ಅವುಗಳ ಸಂರಕ್ಷಣೆ ಮಾಡಬೇಕು. ಸಂರಕ್ಷಣೆ ಕಾರ್ಯ ಬರೀ ಅರಣ್ಯ ಪ್ರದೇಶದಷ್ಟೇ ಅಲ್ಲದೆ, ಪಕ್ಷಿಗಳು, ಪ್ರಾಣಿಗಳು ವಾಸಿಸುವ ಸ್ಥಳದಲ್ಲೇ ಅವುಗಳ ರಕ್ಷಣೆ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಸಂಸ್ಥೆಯ ಮೈಸೂರು ಶಾಖೆ ಅಧ್ಯಕ್ಷ ಡಾ.ಆರ್.ದೀಪು, ಕಾರ್ಯದರ್ಶಿ ಡಾ.ಎಸ್.ಎ.ಮೋಹನ್‌ಕೃಷ್ಣ ಇದ್ದರು.