ಮೈಸೂರು: ಫಿಜ್ಜಾ, ಬರ್ಗರ್, ಪಾನೀಪುರಿ ತಿಂದು ಬೇಸತ್ತಿದ್ದ ನಗರದ ಜನರಿಗೆ ಎರಡು ದಿನಗಳ ಕಾಲ ಗೆಡ್ಡೆ ಗೆಣಸು ಸವಿಯುವ ಅವಕಾಶ ಸಿಕ್ಕಿತ್ತು.
ಸಹಜ ಸಂವೃದ್ಧ ಸಂಸ್ಥೆಯಿಂದ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿದ್ದ ಎರಡು ದಿನಗಳ ಗೆಡ್ಡೆ-ಗೆಣಸು ಮೇಳದಲ್ಲಿ ನಗರದ ಜನರಿಗೆ ಹೊಸ ರುಚಿ ಉಣಬಡಿಸಲಾಯಿತು. ಮೇಳದಲ್ಲಿಯೇ ಗೆಣಸಿನಿಂದ ಮಾಡಿದ ನಾನಾ ಬಗೆಯ ತಿನಿಸು ಮನ ತಣಿಸಿದರೆ, ರುಚಿ ಸವಿದ ಬಳಿಕ ಮನೆಗೂ ಕೊಂಡೊಯ್ದರು.
ಮೇಳದ ವಿವಿಧ ಮಳಿಗೆಗಳಲ್ಲಿ ತಯಾರಾದ ಸುವರ್ಣ ಗೆಡ್ಡೆ ಬಿರಿಯಾನಿ, ಸಿಹಿಗೆಣಸು ಹೋಳಿಗೆ, ಮರಗೆಣಸು ಟಿಕ್ಕಿ, ಚಿಪ್ಸ್, ಉಪ್ಪಿನಕಾಯಿ ಸೇರಿದಂತೆ ಇನ್ನಿತರೆ ಖಾದ್ಯಗಳು ಬಾಯಲ್ಲಿ ನೀರೂರಿಸುವಂತೆ ಮಾಡಿದವು.
ಭಾನುವಾರ ರಜೆಯಿದ್ದ ಹಿನ್ನೆಲೆ ಹೆಚ್ಚು ಜನ ಸೇರಿದ್ದರು. ಹೀಗಾಗಿ ಗೆಡ್ಡೆ, ಗೆಣಸು ಖರೀದಿಯ ಜತೆಗೆ ಗಿಡ, ಜೇನು, ವಿವಿಧ ಬಗೆಯ ತಿನಿಸುಗಳ ವ್ಯಾಪಾರ ಜೋರಾಗಿತ್ತು.
ಎರೆಗೆಣಸು, ಕುವಲೆಗೆಣಸು, ಕೆಸು ಗೆಣಸು ಕಾಸಾಳ ಆಳು, ತೋಟಂಬಲ ಗೆಣಸು, ಬತ್ತಿ ಗೆಣಸು, ಚಿಂದಿ ಗೆಣಸು, ಸಿಹಿ ಗೆಣಸು, ಹಸಿ ಅರಿಶಿಣ, ಬೆಲ್ಲದ ಗೆಣಸು, ಸುವರ್ಣ ಗೆಡ್ಡೆ, ಕೆಸು ಗೆಡ್ಡೆ, ದಾವಂಚೆ ಕೆಸು, ಕುರುಪಣ ಗೆಣಸು, ಮರದ ಕಣಗ, ಬಿಳಿಸಿಹಿ ಗೆಣಸು, ಚಾಣಿ ಗೆಡ್ಡೆ ಸೇರಿದಂತೆ ಬಗೆ ಬಗೆಯ ಗೆಣಸುಗಳನ್ನು ಖರೀದಿಸುವಲ್ಲಿ ಗ್ರಾಹಕರು ಉತ್ಸಾಹ ತೋರಿದರು. 10 ಗ್ರಾಂನಿಂದ 80 ಕೆ.ಜಿ. ವರೆವಿಗೂ ತೂಗುವ ಗೆಣಸು ಮೇಳದಲ್ಲಿ ಗಮನ ಸೆಳೆದವು.
ಗೆಡ್ಡೆ ಗೆಣಸು ಅಡುಗೆ ಸ್ಪರ್ಧೆ: ಮೇಳದ ಅಂಗವಾಗಿ ಗೆಡ್ಡೆ ಗೆಣಸಿನ ಅಡುಗೆ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಸ್ಪರ್ಧೆಯಲ್ಲಿ 10 ಸ್ಪರ್ಧಿಗಳು ಭಾಗವಹಿಸಿದ್ದು, ಕೆಸವಿನಗೆಡ್ಡೆ ಕಾರಗೋಲ್, ಮರಗೆಣಸಿನ ನೂಡಲ್ಸ್, ಸುವರ್ಣ ಗೆಡ್ಡೆ ತವಾ ಪ್ರೈ, ಸಿಹಿಗೆಣಸಿನ ಕೇಕು, ಸಂಜೆ ಮಲ್ಲಿಗೆ ಗೆಡ್ಡೆ ಬೋಂಡಾ, ಸಲ್ಲಾಡ್, ಮಜ್ಜಿಗೆ ಹುಳಿ, ಕ್ಯಾರೇಟ್ ಕೇಕ್ ಸ್ವೀಟ್ ಪೊಟ್ಯಾಟ್ ಕೆನೋ, ಸುವರ್ಣ ಗೆಡ್ಡೆ ಪೊಡಿ, ಸಿಹಿಗೆಣಸಿನ ಲಾಡು ಸೇರಿದಂತೆ ಇತರೆ ಖಾದ್ಯಗಳನ್ನು ಮಾಡಲಾಗಿತ್ತು.
ಸ್ಪರ್ಧೆಯಲ್ಲಿ ಮಂಗಳಾ ಪ್ರಕಾಶ್ (ಪ್ರ), ಮನೋನ್ಮಣಿ, ರತಿ ಸಂತೋಷ್ (ದ್ವಿ), ಬಿ.ಕೆ. ಲೀಲಾವತಿ, ಶ್ರೀದೇವಿ ಹೆಗಡೆ (ತೃ) ಸ್ಥಾನಗಳಿಸಿದರು.