ಮಂಡ್ಯ: ನಗರ ಸ್ಥಳೀಯ ಸಂಸ್ಥೆಗಳು ಪಾರಂಪರಿಕ ತ್ಯಾಜ್ಯ ವಸ್ತುಗಳ ವಿಲೇವಾರಿಗೆ ಹೆಚ್ಚಿನ ನಿಗಾ ವಹಿಸಿ. ಜತೆಗೆ ನಿಗದಿಪಡಿಸಲಾಗಿರುವ ಗುರಿ ಸಾಧಿಸಿ ಎಂದು ಅಧಿಕಾರಿಗಳಿಗರ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕತೆ ವಹಿಸಿ ಮಾತನಾಡಿದ ಅವರು, ಪ್ರತಿದಿನ ಪಾರಂಪರಿಕ ತ್ಯಾಜ್ಯ ವಸ್ತುಗಳ ವಿಲೇವಾರಿಗೆ ಸಂಬಂಧಿಸಿದಂತೆ ಪ್ರತಿದಿನ ಟನ್ ಗಳಲ್ಲಿ ಗುರಿ ನಿಗದಿಪಡಿಸಲಾಗಿದೆ. ಆದರೆ ವಿಲೇವಾರಿ ಕುರಿತಂತೆ ಉತ್ತಮ ಸಾಧನೆ ಕಂಡು ಬಂದಿರುವುದಿಲ್ಲ. ಇದೇ ಮುಂದುವರಿದಲ್ಲಿ ನೋಟೀಸ್ ಜಾರಿ ಮಾಡುವುದಾಗಿ ಎಚ್ಚರಿಕೆ ನೀಡಿದರು.
ವಾರಕ್ಕೊಂದು ವಾರ್ಡ್ ಈ ಖಾತಾ ಆಂದೋಲನವನ್ನು ನಡೆಸಲು ತಾಂತ್ರಿಕಾ ತೊಂದರೆ ಇರುವುದಾಗಿ ತಿಳಿಸಲಾಗಿದೆ. ಆದರೆ ಪ್ರಚಾರ ಕೈಗೊಂಡು ಸಾರ್ವಜನಿಕರಿಂದ ದಾಖಲೆಗಳನ್ನು ಪಡೆದುಕೊಂಡು ತಾಂತ್ರಿಕ ತೊಂದರೆ ಸರಿಪಡಿಸಿದ ತಕ್ಷಣ ಜಾರಿ ಮಾಡಿ. ಇಂದಿರಾ ಕ್ಯಾಂಟೀನ್ ಗಳ ಕಾರ್ಯನಿರ್ವಹಣೆ ಕುರಿತಂತೆ ನಿಗದಿತವಾಗಿ ಪರಿಶೀಲನೆ ನಡೆಸಿ ಸ್ವಚ್ಛತೆ ಹಾಗೂ ಶುದ್ಧ ಕುಡಿಯುವ ನೀರಿನೊಂದಿಗೆ ಗ್ರಾಹಕರಿಗೆ ರುಚಿಯಾದ ಆಹಾರ ಒದಗಿಸಬೇಕು ಎಂದರು.
ಕೆ.ಎಂ.ಎಫ್ ವತಿಯಿಂದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಳಿಗೆ ತೆರೆಯಲು ಉದ್ದೇಶಿಸಿದ್ದು, ಅವರಿಗೆ ಸ್ಥಳವನ್ನು ಗುರುತಿಸಿ ಕೊಡಿ. ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪರಕ್ಕಾಗಿ ಸ್ಥಳ ಗುರುತಿಸಿದರೆ ಪಾದಚಾರಿಗಳು ಓಡಾಡಲು ಹಾಗೂ ಸಂಚಾರ ನಿಯಮ ಪಾಲನೆಗೆ ಉಂಟಾಗುತ್ತಿರುವ ತೊಂದರೆಗಳನ್ನು ಪರಿಹರಿಸಬಹುದು. ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು ಅಥವಾ ಮುಖ್ಯಾಧಿಕಾರಿ ತಮ್ಮ ವ್ಯಾಪ್ತಿಯಲ್ಲಿ ಅಭಿವೃದ್ಧಿಯ ಬಗ್ಗೆ ಚಿಂತಿಸಿ ತೊಂದರೆಯಿರುವ ಕ್ಷೇತ್ರಗಳನ್ನು ಗುರುತಿಸಿ. ಅವುಗಳನ್ನು ಸರಿಪಡಿಸಲು ಪೂರಕವಾಗಿ ಯೋಜನಾ ವರದಿ ಸಿದ್ಧಪಡಿಸಿ ಸಲ್ಲಿಸಿ ಎಂದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶಾಧಿಕಾರಿ ಟಿ.ಎನ್ ನರಸಿಂಹಮೂರ್ತಿ, ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರತಾಪ್, ನಗರಸಭೆ ಪೌರಾಯುಕ್ತೆ ಪಂಪಶ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.