ಹೊಳೆಹೊನ್ನೂರಿನ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಡಾ. ಸೆಲ್ವಮಣಿ ಅವರು ಭೇಟಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಮನೋಹರ್, ಸಾಯೀಶ್ ಚೌಟ, ವಹೀದಾ, ವಿ. ಕುಮಾರ್ ನಾಯ್ಡು, ಎಚ್.ಬಸವರಾಜ್, ಎಂ.ಹರೀಶ್‌ಕುಮಾರ್ ಇತರರಿದ್ದರು.  
ಜಿಲ್ಲೆ

ಹೊಳೆಹೊನ್ನೂರಿನಲ್ಲಿ ನಗರೋತ್ಥಾನ ಕಾಮಗಾರಿ

Shivamogga - Desk - Praveena Kumar S

ಹೊಳೆಹೊನ್ನೂರು: ಸ್ಥಳೀಯ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಜಿಲ್ಲಾಧಿಕಾರಿ ಡಾ. ಎಸ್.ಸೆಲ್ವಮಣಿ ಶುಕ್ರವಾರ ಭೇಟಿ ನೀಡಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ಕಾಮಗಾರಿ ಆರಂಭಿಸಲು ಸರ್ಕಾರ ವರದಿ ಕೇಳಿದೆ. ಸದರಿ ವರದಿ ತಯಾರಿಸಲು ಸ್ಥಳ ಪರಿಶೀಲನೆ ಮಾಡಲಾಗಿದೆ. ನಂತರ ಕಾಮಗಾರಿಗೆ ಅಗತ್ಯ ಅನುದಾನ ಬಿಡುಗಡೆ ಆಗಲಿದ್ದು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಪಟ್ಟಣದ ಪ್ರಮುಖ ಎಂ.ಹರೀಶ್‌ಕುಮಾರ್ ಮಾತನಾಡಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ತೊಂದರೆ ಆಗುತ್ತಿದೆ. ಇ-ಸ್ವತ್ತು ಸೇರಿದಂತೆ ಇತರ ದಾಖಲೆ ಪಡೆಯಲು ವಿಳಂಬ ಆಗುತ್ತಿದೆ. ಪೌರ ಕಾರ್ಮಿಕರ ವೇತನ ಬಿಡುಗಡೆ ಆಗಿಲ್ಲ. ಈ ಬಗ್ಗೆ ಗಮನಹರಿಸಿ ಎಂದು ಮನವಿ ಮಾಡಿದರು.
ಗ್ರಾಪಂ ಮಾಜಿ ಸದಸ್ಯ ಎಚ್.ಬಸವರಾಜ್ ಮಾತನಾಡಿ, ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಸಿಗದೆ ಸಾರ್ವಜನಿಕರು ಅಲೆದಾಡುವಂತಾಗಿದೆ. ಕಚೇರಿಯಲ್ಲಿ ಲಭ್ಯ ಇರುವ ವೇಳಾಪಟ್ಟಿ ಹಾಕಬೇಕು. ಆ ಸಮಯದಲ್ಲಿ ಜನರ ಕೆಲಸ ಮಾಡಿಕೊಡಬೇಕು. ಪಟ್ಟಣದ ಭಗೀರಥ ವೃತ್ತದಲ್ಲಿ ಬಸ್ ನಿಲ್ದಾಣ ಇಲ್ಲದೆ ಮಳೆ, ಬಿಸಿಲಿನಲ್ಲಿ ಇಲ್ಲದೆ ಅಂಗಡಿ ಮುಂಗಟ್ಟುಗಳ ಎದುರು ಬಸ್‌ಗಾಗಿ ಕಾಯಬೇಕಿದೆ. ಆದ್ದರಿಂದ ತಕ್ಷಣ ಬಸ್ ತಂಗುದಾಣ ನಿರ್ಮಾಣ ಮಾಡಬೇಕು ಎಂದು ಕೋರಿಕೊಂಡರು.
ಬಿಜೆಪಿ ಮುಖಂಡ ವಿ.ಕುಮಾರ್ ನಾಯ್ಡು ಮಾತನಾಡಿ, ನಾಡಕಚೇರಿಗೆ ಸರಿಯಾದ ಕಟ್ಟಡ ಇಲ್ಲದೆ ಜನರಿಗೆ ತೀವ್ರ ತೊಂದರೆ ಆಗುತ್ತಿದೆ. ಸರಿಯಾಗಿ ದಾಖಲೆ ರಕ್ಷಿಸಲು ಆಗದೆ ಹಾಳಾಗುತ್ತಿವೆ. ಹಳೇ ಕಂಪ್ಯೂಟರ್ ಇದ್ದು ಕಾರ‌್ಯಕ್ಷಮತೆ ಕಡಿಮೆಯಾಗಿ ಕೆಲಸ ವಿಳಂಬ ಆಗುತ್ತಿದೆ. ಆದ್ದರಿಂದ ಹೊಸ ಕಂಪ್ಯೂಟರ್ ನೀಡುವಂತೆ ಮನವಿ ಮಾಡಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಾಯೀಶ ಚೌಟ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮನೋಹರ್, ಎಇಇ ಮಂಜುನಾಥ್, ಇಇ ವಹೀದಾ, ರಾಜಸ್ವ ನಿರೀಕ್ಷಕ ಬಿ.ಎಂ.ಮಾನೋಜಿ ರಾವ್, ಗ್ರಾಮ ಲೆಕ್ಕಾಧಿಕಾರಿ ಕಲ್ಯಾಣಿ ಬಸವರಾಜ್, ಪಟ್ಟಣ ಪಂಚಾಯಿತಿ ಸಿಬ್ಬಂದಿ ಇದ್ದರು.