ಮಂಗಳೂರು: ಸ್ಮ್ಮಾರ್ಟ್‌ಸಿಟಿಯ ಬಹು ನಿರೀಕ್ಷಿತ ವಾಟರ್ ಫ್ರಂಟ್ (ಜಲಾಭಿಮುಖ ಪ್ರದೇಶ ಅಭಿವೃದ್ಧಿ) ಯೋಜನೆ ಕಾಮಗಾರಿ ತಾತ್ಕಾಲಿಕ ಸ್ಥಗಿತಗೊಳಿಸುವಂತೆ ನಗರಾಭಿವೃದ್ಧಿ ಸಚಿವ ಸುರೇಶ್ ಬೈರತಿ ಸೂಚಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಸ್ಮಾರ್ಟ್‌ಸಿಟಿ, ಒಳಚರಂಡಿ, ಕುಡಿಯುವ ನೀರು ಮೊದಲಾದ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಜಪ್ಪಿನಮೊಗರು ನೇತ್ರಾವತಿ ನದಿಯ ಬಳಿಯಿಂದ ಬೋಳಾರದ ತನಕ ನಿರ್ಮಿಸಲು ಉದ್ದೇಶಿಸಿದ್ದ ವಾಟರ್ ಫ್ರಂಟ್ ಯೋಜನಾ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಸಚಿವರು ಯೋಜನೆ ಪರಿಶೀಲಿಸಿ, ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. 2.1 ಕಿ.ಮೀ. ಕಾಂಕ್ರೀಟು ರಸ್ತೆ ನಿರ್ಮಾಣಕ್ಕೆ 70 ಕೋಟಿ ರೂ. ಖರ್ಚು ಮಾಡಲು ಉದ್ದೇಶಿಸಿರುವುದನ್ನು ಗಮನಿಸಿದ ಸಚಿವರು ಆಶ್ಚರ್ಯಗೊಂಡು ಈ ಯೋಜನೆಗೆ ಇಷ್ಟೊಂದು ಖರ್ಚು ಮಾಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಯೋಜನೆ ಪ್ರಸ್ತಾವನೆಯ ಸಮಗ್ರ ಮರು ಪರಿಶೀಲನೆಯವರೆಗೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಾಧಕ-ಬಾಧಕ ನೋಡಿ ‘ಬಿ ಖಾತಾ’
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ‘ಬಿ’ ಖಾತಾ ನೀಡುವ ನಿಟ್ಟಿನಲ್ಲಿ ಸದನ ಸಮಿತಿ ರಚಿಸಲಾಗಿದೆ. ಅದರ ಸಚಿವ ಈಶ್ವರ ಖಂಡ್ರೆ ಅವರ ಜತೆಗೂ ಸಾಧಕ-ಬಾಧಕ ಚರ್ಚಿಸಿ ‘ಬಿ’ ಖಾತಾ ನೀಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಸಾರ್ವಜನಿಕರ ಜತೆಗೆ ಸರ್ಕಾರಕ್ಕೂ ಲಾಭವಾಗಬೇಕು. ಯಾವ ರೀತಿ ಮಾಡಬಹುದು ಎಂಬುದನ್ನು ಚಿಂತನೆ ಮಾಡಲಾಗುವುದು ಎಂದರು.
ಉರ್ವ ಮಾರುಕಟ್ಟೆ ನವೀಕರಣ
ಉರ್ವಾಮಾರುಕಟ್ಟೆ 20 ಕೋಟಿ ರೂ. ಖರ್ಚು ಮಾಡಿ ನಿರ್ಮಾಣ ಮಾಡಿ ಹಲವು ವರ್ಷಗಳೇ ಆದರೂ ಇನ್ನೂ ವ್ಯಾಪಾರಿಗಳಿಗೆ ಯಾಕೆ ಅವಕಾಶವಾಗಿಲ್ಲ ಎಂದು ಸಚಿವರು ಪ್ರಶ್ನಿಸಿದಾಗ, ಪಾಲಿಕೆ ಆಯುಕ್ತ ಆನಂದ್ ಅವರು ಪ್ರತಿಕ್ರಿಯಿಸಿ, ಅಲ್ಲಿ ಗಾಳಿಯ ವ್ಯವಸ್ಥೆ ಇಲ್ಲ. ಹಾಗಾಗಿ ವ್ಯಾಪಾರಿಗಳು ಬರಲು ಒಪ್ಪುತ್ತಿಲ್ಲ. ಮತ್ತೆ ನವೀಕರಣ ಮಾಡಲು 4 ಕೋಟಿ ಅಗತ್ಯವಿದೆ ಎಂದಾಗ ಪ್ರಸ್ತಾವನೆ ಕಳುಹಿಸಿ, ಶೀಘ್ರದಲ್ಲೇ ಸರಿ ಪಡಿಸಿ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಮಾಡಿ ಎಂದು ಸಚಿವರು ಸೂಚಿಸಿದರು.
ಸುಲ್ತಾನ್ ಬತ್ತೇರಿಗೆ ರಸ್ತೆ ಸೇತುವೆ
ಸುಲ್ತಾನ್ ಬತ್ತೇರಿಯಿಂದ ಬೆಂಗರೆಗೆ ತೂಗು ಸೇತುವೆ ಮಾಡಲು ಉದ್ದೇಶಿಸಲಾಗಿತ್ತು. ನಂತರ ಸ್ಥಳೀಯ ಮೀನುಗಾರರ ಬೇಡಿಕೆಯ ಮೇರೆಗೆ 49 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆ ಸೇತುವೆ ಮಾಡಲು ಚಿಂತಿಸಲಾಗಿದೆ ಎಂದು ಅಧಿಕಾರಿ ಸಭೆಯಲ್ಲಿ ತಿಳಿಸಿದರು.
ಸ್ಥಳೀಯರಿಗೆ ಪೂರಕವಾಗುವಂತೆ ವಾಹನ ಸಂಚಾರಕ್ಕೆ ಪೂರಕವಾದ ರಸ್ತೆ ಸೇತುವೆಯನ್ನೇ ನಿರ್ಮಿಸಿ. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಎಂದು ಸಚಿವ ಸುರೇಶ್ ಬೈರತಿ ನಿರ್ದೇಶನ ನೀಡಿದರು.
ನಾಯರ್ ಕುದ್ರು ಐಲ್ಯಾಂಡ್ ಪ್ರಸ್ತಾವನೆ ಬದಲಾವಣೆಗೆ ಸೂಚನೆ
ನಾಯರ್‌ಕುದ್ರು ದ್ವೀಪ ಅಭಿವೃದ್ಧಿಗೆ ಸಂಬಂಧಿಸಿ 49 ಕೋಟಿರೂ. ವೆಚ್ಚದ ಯೋಜನೆ ರೂಪಿಸಲಾಗಿದ್ದು, ಓಪನ್ ಏರ್ ಥಿಯೇಟರ್, ವಾಟರ್‌ಸ್ಪೋರ್ಟ್ಸ್ ಯೋಜನೆಗಳನ್ನು ಒಳಗೊಂಡಿದೆ. ಆದರೆ ಸಿಆರ್‌ಝೆಡ್ ಅನುಮತಿ ದೊರಕಿಲ್ಲ ಎಂದು ಸ್ಮಾರ್ಟ್‌ಸಿಟಿ ಅಧಿಕಾರಿ ಮಾಹಿತಿ ನೀಡಿದರು.
ಹೀಗೆ ಮಾಡಿದರೆ ಈ ಜನ್ಮದಲ್ಲಿ ಈ ಯೋಜನೆ ಪೂರ್ಣಗೊಳ್ಳದು. ಕೇಂದ್ರ ಅಥವಾ ರಾಜ್ಯದಿಂದ ಸಿಆರ್‌ಝೆಡ್ ಅನುಮತಿ ದೊರಕುವುದಿಲ್ಲ. ಹಾಗಾಗಿ ಪ್ರಸ್ತಾವನೆ ಬದಲಾವಣೆ ಮಾಡಿ ಕಳುಹಿಸಿ ಎಂದು ಸಚಿವ ಸುರೇಶ್ ಬೈರತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅನುದಾನ ತಡೆಯಿಂದ ಸಮಸ್ಯೆ
ಮಹಾತ್ಮಾಗಾಂಧಿ ನಗರೋತ್ಥಾನ ಯೋಜನೆಯಡಿ ಈಗಾಗಲೇ ಆರಂಭಿಸಲಾದ ಕಾಮಗಾರಿ ಬಹುತೇಕ ಅರ್ಧದಲ್ಲಿರುವಾಗಲೇ 125 ಕೋ.ರೂ ಅನುದಾನಕ್ಕೆ ತಡೆ ನೀಡಲಾಗಿದೆ. ಇದರಿಂದ ಕಾಮಗಾರಿ ನಡೆಸಲು ಸಮಸ್ಯೆ ಆಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.
ಕಾಮಗಾರಿ ಆರಂಭವಾಗಿರುವುದನ್ನು ಹಾಗೂ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದ ಯೋಜನೆಗೆ ಅನುದಾನ ತಡೆ ನೀಡಿಲ್ಲ. ಆದರೆ, ಬಾಯಿ ಮಾತಿನಲ್ಲೇ ಘೋಷಣೆ ಮಾಡಿ, ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆಯದ ಯೋಜನೆಗೆ ಅನುಮೋದನೆ ನೀಡುವುದಿಲ್ಲ ಎಂದು ಸಚಿವರು ಹೇಳಿದರು. 125 ಕೋ.ರೂ.ಗಳ ಎಲ್ಲಾ ಯೋಜನೆಗಳು 2019-20ರಲ್ಲಿಯೇ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದಿದೆ ಎಂದರು. ಹಾಗಾದರೆ 4 ವರ್ಷದಿಂದ ಯಾಕೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಮರುಪ್ರಶ್ನಿಸಿ, ಆರ್ಥಿಕ ಇಲಾಖೆಯಿಂದ ಅನುಮೋದನೆ ಆಗಿದ್ದರೆ ಅದಕ್ಕೆ ಅನುಮತಿ ನೀಡಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪ ಮೇಯರ್ ಸುನಿತಾ, ಮನಪಾ ಆಯುಕ್ತ ಆನಂದ್ ಉಪಸ್ಥಿತರಿದ್ದರು.
ಸರ್ಕಾರಿ ಜಾಗ ಅತಿಕ್ರಮಣ ವಿಶೇಷ ಕಾರ್ಯಾಚರಣೆ
ನಗರದಲ್ಲಿ ಹಲವು ರಾಜಕಾಲುವೆಗಳು, ಸರ್ಕಾರಿ ಜಮೀನು ಒತ್ತುವರಿಯಾಗಿದೆ ಎಂದು ಮನಪಾ ಸದಸ್ಯ ವಿನಯರಾಜ್ ಸಚಿವರ ಗಮನ ಸೆಳೆದರು.
ಇದು ಗಂಭೀರ ವಿಚಾರ. ಸರ್ಕಾರಿ ಜಮೀನು, ಸ್ಮಶಾನ ಅಥವಾ ರಾಜಕಾಲುವೆ ಒತ್ತುವರಿ ಅಪರಾಧವಾಗಿದ್ದು, ಒತ್ತುವರಿ ಆಗಿದ್ದ ಪ್ರಕರಣಗಳಲ್ಲಿ ತಕ್ಷಣ ತೆರವುಗೊಳಿಸಲು ವಿಶೇಷ ಕಾರ್ಯಾಚರಣೆ ನಡೆಸುವಂತೆ ಪಾಲಿಕೆ ಆಯುಕ್ತರಿಗೆ ಸಚಿವ ಸುರೇಶ ಬೈರತಿ ನಿರ್ದೇಶನ ನೀಡಿದರು.
ಮಂಗಳೂರು ನಗರಕ್ಕೆ ಬೃಹತ್ ಸ್ವಚ್ಛತಾ ಯಂತ್ರ
ಮಂಗಳೂರು ನಗರ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಗೆ ಖರೀದಿಸಲಾದ ವಾಹನಗಳು ಎರಡು ತಿಂಗಳಾದರೂ ಉಪಯೋಗಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಸುರೇಶ ಬೈರತಿ, 3-4 ತಿಂಗಳಿನಿಂದ ವಾಹನಗಳನ್ನು ನಿಂತಲ್ಲೇ ನಿಲ್ಲಿಸಿದರೆ ವಾಹನಗಳು ಕಾರ್ಯನಿರ್ವಹಿಸುವುದಿಲ್ಲ ಎಂದಾಗ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ವಾರದೊಳಗೆ ಜಿಲ್ಲಾಧಿಕಾರಿಯವರ ಅನುಮೋದನೆಯೊಂದಿಗೆ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದರು. ಸಚಿವರು ಮಾತನಾಡಿ, ಸ್ವಚ್ಚತೆಯ ಹಿನ್ನೆಲೆಯಲ್ಲಿ ಹಾಸನ, ಮೈಸೂರು ಸೇರಿದಂತೆ, ಮಂಗಳೂರು ನಗರಕ್ಕೂ ಅಗತ್ಯವಿದ್ದಲ್ಲಿ ಬೃಹತ್ ಸ್ವಚ್ಚತಾ ಯಂತ್ರವನ್ನು ನೀಡಲಾಗುವುದು ಎಂದರು.
ಚೀಫ್ ಇಂಜೀನಿಯರ್ ಗೆಟ್ ಔಟ್
ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್‌ಸಿ) ಚೀಫ್ ಇಂಜಿನಿಯರ್‌ಗೆ ಸಚಿವ ಸುರೇಶ್ ಬೈರತಿ ಗೆಟ್ ಔಟ್ ಎಂದು ಸಭೆಯಿಂದ ಹೊರಹಾಕಿದ ಘಟನೆ ಸಭೆಯಲ್ಲಿ ನಡೆದಿದೆ.
ಕೆಯುಐಡಿಎಫ್‌ಸಿ ಕಾಮಗಾರಿಗಳು ತೀವ್ರ ವಿಳಂಬಗತಿಯಲ್ಲಿ ನಡೆಯುತ್ತಿದೆ. ಶೇ.60ರಷ್ಟು ಕಾಮಗಾರಿ ನಡೆಸಲು 4 ವರ್ಷ ಹಿಡಿದಿದೆ. ಇನ್ನುಳಿದ ಶೇ.40ರಷ್ಟು ಕಾಮಗಾರಿ ಇನ್ನು ನಾಲ್ಕೈದು ತಿಂಗಳಲ್ಲಿ ಸಂಪೂರ್ಣಗೊಳಿಸಲು ಸಾಧ್ಯವೇ? ಎಂದು ಚೀಫ್ ಇಂಜಿನಿಯರ್ ಜಯರಾಮ್ ಅವರನ್ನು ಸಚಿವರು ಪ್ರಶ್ನಿಸಿದರಲ್ಲದೆ, ತೀವ್ರ ತರಾಟೆಗೆ ತೆಗೆದುಕೊಂಡರು. ಈ ವೇಳೆ ಜಯರಾಮ್ ಹಾಗಾದರೆ ನಾನು ರಿಸೈನ್ ಮಾಡ್ತೇನೆ ಎಂದರು. ಇದರಿಂದ ತೀವ್ರ ಕೆರಳಿದ ಸಚಿವರು, ಗೆಟ್ ಔಟ್ ಫ್ರಂ ಹಿಯರ್ ಎಂದು ಆಜ್ಞೆ ಮಾಡಿದರು. ಕೊನೆಗೆ ಅಧಿಕಾರಿ ಸಭೆಯಿಂದ ಹೊರನಡೆದರು.
ಜಯರಾಮ್ ಅವರು ಕೆಯುಐಡಿಎಫ್‌ಸಿ ಚೀಫ್ ಎಂಜಿನಿಯರ್ ಆಗಿ ನಿವೃತ್ತರಾದ ಬಳಿಕ ಗುತ್ತಿಗೆ ಆಧಾರದಲ್ಲಿ ಮುಂದುವರಿದಿದ್ದರು.