ತುಮಕೂರು: ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ತುಮಕೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳು, ಸದಸ್ಯರ ಜತೆ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಗುರುವಾರ ಬೆಳಗ್ಗೆ ಪಾಲಿಕೆ ಸಭಾಂಗಣದಲ್ಲಿ ಸಭೆ ನಡೆಸಿದ ಸಚಿವರು, ನಗರದ ಮಧ್ಯಭಾಗ ಮಾತ್ರ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡದೆ ಹೊರಭಾಗದ ವಾರ್ಡ್‌ಗಳಲ್ಲಿಯೂ ಕೆಲಸಗಳಾಗಬೇಕು ಎಂದು ಸೂಚಿಸಿದರು. ಬೆಂಗಳೂರು ಉಪನಗರವಾಗಿ ತುಮಕೂರು ಅಭಿವೃದ್ಧಿಯಾಗಬೇಕು, ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಶೀಘ್ರ ಕೆಲಸಗಳಾಗಬೇಕು, ಕುಡಿಯುವ ನೀರು, ರಸ್ತೆ, ಒಳಚರಂಡಿ ಸೇರಿ ಎಲ್ಲ ಮೂಲಸೌಕರ್ಯ ಒದಗಿಸಬೇಕು ಎಂದು ಹೇಳಿದರು.
ಸ್ಮಾರ್ಟ್‌ಸಿಟಿ ಕಾಮಗಾರಿ ಬಗ್ಗೆ ಸಾಕಷ್ಟು ದೂರುಗಳು ಇಲ್ಲಿನ ಜನಪ್ರತಿನಿಧಿಗಳು, ಸಾರ್ವಜನಿಕರಿಂದ ಬಂದಿವೆ. ನಗರದಲ್ಲಿ ಧೂಳುಮಯವಾಗಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಮುಖ್ಯ ಇಂಜಿನಿಯರ್ ಸಿದ್ಧಗಂಗಪ್ಪಗೆ ಸೂಚಿಸಿದರು.
ತುಮಕೂರಿಗೆ 22 ಹಳ್ಳಿಗಳು ಇತ್ತೀಚೆಗೆ ವಿಲೀನಗೊಂಡಿದ್ದು, ಈ ಹಳ್ಳಿಗಳ ರಸ್ತೆಗಳ ಅಭಿವೃದ್ಧಿಗೂ ಅಧಿಕಾರಿಗಳು ಗಮನಹರಿಸಬೇಕು. ಆದ್ಯತೆ ಮೇರೆಗೆ ಹಣವನ್ನು ಎಲ್ಲ ವಾರ್ಡ್‌ಗಳಿಗೂ ಸಮನಾಗಿ ಹಂಚಬೇಕು ಎಂದರು.
ಆಯುಕ್ತ ಟಿ.ಭೂಬಾಲನ್ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ವಿವರಿಸಿದರು. ಡಿಜಿಟಲ್ ಲೈಬ್ರರಿ, ಸ್ಮಾರ್ಟ್‌ಕ್ಲಾಸ್‌ರೂಂ, ರಿಂಗ್‌ರೋಡ್, ಅಮಾನಿಕೆರೆ, ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ತುಮಕೂರು ಸ್ಮಾರ್ಟ್‌ಸಿಟಿ ಯೋಜನೆಗೆ ಬಂದಿರುವ 125 ಕೋಟಿ ರೂ. ಅನುದಾನದಲ್ಲಿ ತುಮಕೂರು ನಗರದ ಬಡಾವಣೆಗಳ ರಸ್ತೆ, ಚರಂಡಿ, ಕುಡಿಯುವ ನೀರು, ಸ್ವಚ್ಛತೆ ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಸಾಕಾಗುತ್ತಿಲ್ಲ ಎಂದರು.
ವಿಶೇಷವಾಗಿ ತುಮಕೂರು ನಗರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ನಲ್ಲಿ ಅನುದಾನ ಒದಗಿಸಲು ಸಚಿವರಲ್ಲಿ ಮನವಿ ಮಾಡಿದರು. ನಗರಸಭೆ ಹಾಗೂ ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರತರಾಗಿರುವುದರಿಂದ ಮಹಾನಗರ ಪಾಲಿಕೆ ಕೆಲಸಗಳಲ್ಲಿ ಅಡಚಣೆ ಉಂಟಾಗಿದೆ. ಇದನ್ನು ಪರಿಹರಿಸಲು ಸಚಿವರು ಮಾರ್ಗದರ್ಶನ ಮಾಡಬೇಕು ಎಂದರು. ರೆವಿನ್ಯೂ ಜಾಗಗಳಲ್ಲಿ ಮನೆಗಳನ್ನು ಕಟ್ಟಿಕೊಂಡಿರುವ ಜನರಿಗೆ ಖಾತೆ ಮಾಡಿಕೊಡುವುದು ತೆರಿಗೆ ವಸೂಲಿಯ ಬಗ್ಗೆ ಮತ್ತು ನಗರದ ಸಮಸ್ಯೆಗಳ ಬಗ್ಗೆ ಮೇಯರ್ ಫರೀದಾ ಬೇಗಂ ನೇತೃತ್ವದಲ್ಲಿ ನಗರಸಭಾ ಸದಸ್ಯರು ಸಚಿವರಲ್ಲಿ ಮನವಿ ಮಾಡಿದರು.
ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಿಎಂ ಗಮನಕ್ಕೆ ತಂದು ಬೇಡಿಕೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಉಪಮೇಯರ್ ಶಶಿಕಲಾ ಮತ್ತಿತರರು ಇದ್ದರು.
ಪಾಲಿಕೆಯ ಕಂದಾಯ ಹಾಗೂ ತಾಂತ್ರಿಕ ಶಾಖೆಯಲ್ಲಿ ಜನರ ಕೆಲಸವಾಗುತ್ತಿಲ್ಲ ಎಂಬ ದೂರುಗಳಿವೆ, ಸಾಕಷ್ಟು ವರ್ಷದಿಂದ ಇಲ್ಲೇ ಠಿಕಾಣಿ ಹೂಡಿರುವ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಹಿಸುವ ಜತೆಗೆ ಅಗತ್ಯ ಸಿಬ್ಬಂದಿ ನೇಮಕವಾಗಬೇಕು. ಜಿ.ಬಿ.ಜ್ಯೋತಿಗಣೇಶ್ ಶಾಸಕ