ಜಿಲ್ಲೆ

ಚುನಾಯಿತ ಆಡಳಿತ ಇಲ್ಲದೆ ನಗರ ಅಭಿವೃದ್ಧಿ ನಾಸ್ತಿ: ರಾಜಧಾನಿ ಜನರಿಗೆ ಸೌಲಭ್ಯ ಮರೀಚಿಕೆ

ಆರ್​​.ತುಳಸಿಕುಮಾರ್​ ಬೆಂಗಳೂರು

ರಾಜಧಾನಿ ಬೆಂಗಳೂರು ನಗರದ ಕಾರ್ಪೊರೇಷನ್‌ನಲ್ಲಿ ಚುನಾಯಿತ ಆಡಳಿತ ಇಲ್ಲದೆ ಬುಧವಾರ (ಸೆ.10) ಐದು ವರ್ಷ ಪೂರ್ಣಗೊಳ್ಳಲಿದೆ. ಈ ಅವಧಿಯಲ್ಲಿ ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಪಾಲಿಕೆಯ ಸ್ಥಳೀಯ ಆಡಳಿತ ಸಂಪೂರ್ಣ ಸೊರಗಿದ್ದು, ನಾಗರಿಕಗೆ ಸಿಗಬೇಕಾದ ಸೌಲಭ್ಯ ಕೈಗೆಟುಕದೆ ಭಾರಿ ನಿರಾಶೆಗೆ ಒಳಗಾಗಿದ್ದಾರೆ.

2015ರ ಆಗಸ್ಟ್‌ನಲ್ಲಿ ಬಿಬಿಎಂಪಿಗೆ ಚುನಾವಣೆ ನಡೆದು ಸೆ.10ರಂದು ಅಧಿಕೃತವಾಗಿ ಆಡಳಿತ ಅವಧಿ ಆರಂಭಗೊಂಡಿತು. ಐದು ವರ್ಷದ ಅವಧಿಯ 2020ರ ಸೆ.10ಕ್ಕೆ ಕೊನೆಗೊಂಡರೂ, ಹೊಸದಾಗಿ ಎಲೆಕ್ಷನ್ ನಡೆಯಲಿಲ್ಲ. ಬದಲಾಗಿ ಆಡಳಿತಗಾರರನ್ನು ನೇಮಿಸಿದ ಪರಿಣಾಮ ಅಧಿಕಾರಿಗಳ ದರ್ಬಾರ್‌ನಲ್ಲಿ ಹೇಳಿಕೊಳ್ಳುವಂತೆ ಕೆಲಸ ಆಗಲೇ ಇಲ್ಲ. ಚುನಾವಣೆ ನಡೆಸುವುದಾಗಿ ಸರ್ಕಾರ ಹೇಳಿಕೆಗೆ ಸೀಮಿತವಾಯಿತೆ ಹೊರತು ಇಚ್ಛಾಶಕ್ತಿ ಪ್ರದರ್ಶಿಸಲಿಲ್ಲ.

ದೇಶದ ವಿವಿಧ ರಾಜ್ಯಗಳಿಗೆ ಹಲವು ವಿಷಯಗಳಲ್ಲಿ ಮಾದರಿಯಾಗಿರುವ ಬೆಂಗಳೂರು, ಸ್ಥಳೀಯಾಡಳಿತ ವಿಚಾರದಲ್ಲಿ ಮಾತ್ರ ಹಿಂದೆ ಬಿದ್ದಿದೆ. ಇದರ ನೇರ ಪರಿಣಾಮ ನಗರದ ಅಭಿವೃದ್ಧಿ ಮೇಲೆ ಆಗಿದ್ದು, ಒಂದು ಕೋಟಿಗೂ ಅಧಿಕ ಜನರಿಗೆ ಸಿಗಬೇಕಿದ್ದ ಸೌಕರ್ಯ ಲಭ್ಯವಾಗಿಲ್ಲ. ಇದರಿಂದಾಗಿ ಐಟಿ ಸಿಟಿಗೆ ಜಾಗತಿಕ ಮಟ್ಟದ ಮೂಲಸೌಕರ್ಯ ಕಲ್ಪಿಸುವ ಸರ್ಕಾರದ ಆಶಯ ಕಾಗದದ ಮೇಲೆಯೇ ಉಳಿಯುವಂತಾಗಿದೆ.

ಹೊಸ ಪಾಲಿಕೆಗಳ ರಚನೆಯಿಂದ ಚಿಗುರಿದ ಆಸೆ:

ಬಿಬಿಎಂಪಿಯನ್ನು ವಿಂಗಡಿಸಿ ಹೊಸದಾಗಿ ಐದು ನಗರ ಪಾಲಿಕೆಗಳನ್ನಾಗಿ ರಚಿಸಲಾಗಿದೆ. ಇವು ಈಗಷ್ಟೇ ಅಸ್ತಿತ್ವಕ್ಕೆ ಬಂದಿದ್ದು, ಆಡಳಿತ ವ್ಯವಸ್ಥೆಗೆ ಇನ್ನಷ್ಟೇ ಹೊಂದಿಕೊಳ್ಳಬೇಕಿದೆ. ಈ ಮಧ್ಯೆ ವಾರ್ಡ್ ವಿಂಗಡಣೆ, ಮೀಸಲು ನಿಗದಿ ಬಳಿಕವೇ ಕಾರ್ಪೊರೇಷನ್‌ಗಳಿಗೆ ಚುನಾವಣೆ ನಿಗದಿಯಾಗಲಿದೆ. ಸದ್ಯ ಪ್ರಗತಿಯಲ್ಲಿರುವ ಈ ಪ್ರಕ್ರಿಯೆ ನವೆಂಬರ್ ತಿಂಗಳಾಂತ್ಯದೊಳಗೆ ಪೂರ್ಣಗೊಂಡು ಮುಂದಿನ ವರ್ಷದ ಫೆಬ್ರವರಿ ವೇಳೆಗೆ ಚುನಾವಣೆ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಇದು ನಾಗರಿಕರು ಸೇರಿ ರಾಜಕೀಯ ಪಕ್ಷಗಳಲ್ಲಿ ಎಲೆಕ್ಷನ್ ನಡೆಯುವ ಆಸೆ ಚಿಗುರಿಸಿದೆ.

ಆದರೆ, ಹಾಲಿ ಕೈಗೊಂಡಿರುವ ವಾರ್ಡ್ ವಿಂಗಡಣೆ ಹಾಗೂ ಮೀಸಲು ನಿಗದಿ ಕಸರತ್ತು ನಿಯಮದಂತೆ ನಡೆದಲ್ಲಿ ಮಾತ್ರ ಕಾಲಮಿತಿಯೊಳಗೆ ಚುನಾವಣೆ ನಡೆಸಬಹುದು. ಇದಕ್ಕಾಗಿ ಸರ್ಕಾರ ವಿಧಿಸಿಕೊಂಡಿರುವ ವೇಳಾಪಟ್ಟಿಯಂತೆ ವಿವಿಧ ಹಂತಗಳಲ್ಲಿ ಕೆಲಸ ಸಾಗಬೇಕಿದೆ. ಒಂದು ವೇಳೆ ವಿಳಂಬ ಆದಲ್ಲಿ ಮಾರ್ಚ್‌ನಿಂದ ಶಾಲಾ-ಕಾಲೇಜುಗಳ ವಿವಿಧ ಪರೀಕ್ಷೆಗಳು ಆರಂಭಗೊಂಡು ಎಲೆಕ್ಷನ್‌ಗೆ ಶಿಕ್ಷಕರು, ಶಾಲಾ ಕಟ್ಟಡ ಸಿಗದೇಹೋಗಬಹುದು. ಜತೆಗೆ ಸರ್ಕಾರದ ಬಜೆಟ್ ಮಂಡನೆಯಾಗುವುದರಿಂದ ಚುನಾವಣೆ ಮೇಲೆ ಕರಿನೆರಳು ಬೀಳುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಹಾಗಾಗದಂತೆ ಸರ್ಕಾರ ಎಚ್ಚರ ವಹಿಸಿ ಹೊಸ ಪಾಲಿಕೆಗಳಿಗೆ ಎಲೆಕ್ಷನ್ ನಡೆಸಿ ಚುನಾಯಿತ ಸರ್ಕಾರವನ್ನು ಸ್ಥಾಪಿಸುವ ಇಚ್ಛಾಶಕ್ತಿ ಕೈಗೊಳ್ಳಬೇಕಾದ ಅಗತ್ಯತೆ ಇದೆ.

ಆಡಳಿತಾಧಿಕಾರಿ ಅವಧಿಯಲ್ಲಿ ಜನಸ್ಪಂದನೆಗಿಲ್ಲ ಮಣೆ:

ಬಿಬಿಎಂಪಿಯಲ್ಲಿ 5 ವರ್ಷ ಆಡಳಿತಾಧಿಕಾರಿಗಳ ಅವಧಿಯಲ್ಲಿ ನಗರದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಲಿಲ್ಲ ಎಂಬ ಆಕ್ಷೇಪ ನಾಗರಿಕರಿಂದ ವ್ಯಕ್ತವಾಗಿದೆ. ಸಣ್ಣ ಸಮಸ್ಯೆಗೂ ಅಧಿಕಾರಿಗಳನ್ನು ಗೋಗರೆಯಬೇಕಿತ್ತು. ಕಚೇರಿಗಳಿಗೆ ಅಲೆದಾಟ ನಡೆಸಿದರೂ ಸೌಕರ್ಯ ಪಡೆದುಕೊಳ್ಳಲು ತ್ರಾಸ ಉಂಟಾಯಿತೆಂಬ ಆರೋಪಗಳ ಸುರಿಮಳೆ ಕೇಳಿಬಂದಿದೆ. ಮುಖ್ಯ ಆಯುಕ್ತ ಹುದ್ದೆಯಿಂದ ಹೊರಹೋಗುವ ಮುನ್ನ ತುಷಾರ್ ಗಿರಿನಾಥ್ ಎಲ್ಲ ಎಂಟೂ ವಲಯಗಳಲ್ಲಿ ನಡೆಸಿದ ಅಹವಾಲು ಆಲಿಕೆ ಹೊಂದಿಷ್ಟು ರಿಲೀಫ್​​​ ನೀಡಿತು.

ರಸ್ತೆಗುಂಡಿಗಳದ್ದೇ ಭಾರಿ ಸಮಸ್ಯೆ:

ಕಳೆದ ಐದು ವರ್ಷಗಳಿಂದ ನಗರದ ಜನರನ್ನು ರಸ್ತೆಗುಂಡಿ ಸಮಸ್ಯೆ ನಕ್ಷತ್ರಿಕನಂತೆ ಕಾಡುತ್ತಿದೆ. ಪ್ರಮುಖ ರಸ್ತೆಗಳು ಗುಂಡಿಮಯ ಆಗಿದ್ದರೂ ಅವುಗಳನ್ನು ದುರಸ್ತಿ ಮಾಡುವ ಕಾರ್ಯ ಪೂರ್ಣಗೊಂಡಿಲ್ಲ. ವಿವಿಧ ನೆಪ ಒಡ್ಡಿ ಅಧಿಕಾರಿಗಳು ಹೊಂದಿಷ್ಟು ಪ್ರದೇಶಗಳಲ್ಲಿ ಗುಂಡಿ ಮುಚ್ಚಿ ಜನರಿಂದ ನಿಂದನೆ ತಪ್ಪಿಸಿಕೊಂಡರು. ಈಗಲೂ ನೂರಾರು ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ಶಾಶ್ವತ ಪರಿಹಾರ ಮರೀಚಿಕೆ ಆಗಿದೆ.

ಶಾಸಕರಿಂದಲೂ ಅಭಿವೃದ್ಧಿ ಕಡೆಗಣನೆ?:

ಬಿಬಿಎಂಪಿಯಲ್ಲಿ ಪುರಪಿತೃಗಳಿಲ್ಲದ ಕಾರಣ ನಗರದ 28 ಶಾಸಕರ ಮೇಲೆ ಅಭಿವೃದ್ಧಿಯ ಹೊಣೆ ವರ್ಗಾವಣೆಯಾಗಿತ್ತು. ಇದನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಎಂಎಲ್‌ಎಗಳಿಂದ ಸಾಧ್ಯವಾಗಿಲ್ಲ ಎಂಬ ಅಪಸ್ವರ ಕೇಳಿಬಂದಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ನಗರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಸಿಕ್ಕಿಲ್ಲ ಎಂಬುದಾಗಿ ಶಾಸಕರೇ ಆಕ್ಷೇಪ ಎತ್ತಿದ್ದಾರೆ. ಸಕಾಲದಲ್ಲಿ ಅನುದಾನ ಸಿಗದೆ ರಾಜಧಾನಿ ಅಭಿವೃದ್ಧಿಗೆ ಹಿನ್ನಡೆಯಾಗಲು ಕಾರಣ ಎಂದು ಬೊಟ್ಟು ಮಾಡಲಾಗಿದೆ.

ಯಾವೆಲ್ಲ ಯೋಜನೆಗಳು ವಿಳಂಬ:

* ಮೇಲ್ಸೇತುವೆ/ಕೆಳಸೇತುವೆಗಳ ಕಾಮಗಾರಿ

* ರಸ್ತೆ ವಿಸ್ತರಣೆ, ರಸ್ತೆಗಳಿಗೆ ಡಾಂಬರೀಕರಣ

* ವೈಟ್ ಟಾಪಿಂಗ್, ಟೆಂಡರ್ ಶ್ಯೂರ್ ಕಾಮಗಾರಿ

* ಮಳೆನೀರುಗಾಲುವೆಗಳ ಪುನರುಜ್ಜೀವನ

* ಕೆರೆಗಳ ಅಭಿವೃಧ್ಧಿ/ಪುನಶ್ಚೇತನ

* ಪಾಲಿಕೆ ಶಾಲೆ/ಕಾಲೇಜುಗಳಿಗೆ ಕಾಯಕಲ್ಪ

* ಪಿಎಚ್‌ಸಿ, ಹೆರಿಗೆ ಆಸ್ಪತ್ರೆಗಳಿಗೆ ಹೊಸ ಕಟ್ಟಡ ನಿರ್ಮಾಣ

* ಹೊಸ ಪ್ರದೇಶಗಳಲ್ಲಿ ಮೂಲಸೌಕರ್ಯ ಜಾರಿ

* ಬಡವರಿಗೆ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ

* ಕಸ ಸಂಗ್ರಹ/ವಿಲೇವಾರಿ/ಸಂಸ್ಕರಣಾ ಘಟಕ ಸ್ಥಾಪನೆ