ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಾಸವಿರುವ ಸಾರ್ವಜನಿಕರಿಗೆ ಮನೆ ನಿರ್ಮಾಣಕ್ಕೆ ಇದ್ದ ಹಲವಾರು ತೊಡಕು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ಕರಡು ಅಧಿಸೂಚನೆ ಹೊರಡಿಸಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ಅಧಿಸೂಚನೆಯಲ್ಲಿ ಕೃಷಿ ವಲಯದಲ್ಲಿ ಮನೆ ನಿರ್ಮಾಣದ ಉದ್ದೇಶಕ್ಕೆ ನಿಗದಿ ಪಡಿಸಿದ್ದ 11.1.2023ರ ಗಡುವು ರದ್ದುಪಡಿಸಲಾಗಿದೆ. ಅವೈಜ್ಞಾನಿಕ ಉದ್ದೇಶಿತ ರಸ್ತೆ, ಎಚ್ಟಿ ವಿದ್ಯುತ್ ಮಾರ್ಗ, ರೈಲು ಮಾರ್ಗ, ತೋಡು ಮತ್ತಿತರ ವಿಷಯಗಳಲ್ಲಿ ಝೊನಲ್ ರೆಗ್ಯುಲೇಷನ್ನಲ್ಲಿ ವಾಸ್ತವಕ್ಕಿಂತ ಭಿನ್ನವಾಗಿ ನಮೂದಿಸಿದ ಅಂಶ ಸರಿಪಡಿಸಲು ಸೂಚಿಸಲಾಗಿದೆ. ಸಾರ್ವಜನಿಕ ಅಥವಾ ಅರೆ ಸಾರ್ವಜನಿಕ ವಲಯವನ್ನಾಗಿ ತಪ್ಪಾಗಿ ಗುರುತಿಸಿರುವ ಸ್ಥಳಗಳ ಕ್ರಮಬದ್ಧ ಅವಕಾಶ ಕಲ್ಪಿಸಲಾಗಿದೆ.
ಉಡುಪಿ ನಗರ ಪ್ರಾಧಿಕಾರದ ವ್ಯಾಪ್ತಿಯಲ್ಲಿಯ ಹಲವಾರು ವರ್ಷದಿಂದ ಮನೆ ನಿರ್ಮಾಣಕ್ಕೆ ತೊಡಕಾಗಿದ್ದ ಬಗ್ಗೆ ಈ ಹಿಂದೆ ನಗರಾಭಿವೃದ್ಧಿ ಸಚಿವ ಮತ್ತು ಅಧಿಕಾರಿಗಳಿಗೆ ಪತ್ರ ಬರೆದಿದ್ದೆ. ನಿಯಮ ಸರಿಪಡಿಸುವಂತೆ ಮನವಿ ಮಾಡಿಕೊಂಡಿದ್ದೆ. ಹಿಂದಿನ ವಿಧಾನಸಭಾ ಅಧಿವೇಶನದಲ್ಲಿಯೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ, ಸರಿಪಡಿಸುವಂತೆ ಆಗ್ರಹಿಸಿದ್ದೆ. ಇದೀಗ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಮನವಿಗೆ ಸ್ಪಂದಿಸಿ ಕರಡು ಅಧಿಸೂಚನೆ ಹೊರಡಿಸಿದ್ದಾರೆ. ಈಗಿದ್ದ ಸಮಸ್ಯೆಗೆ ಪರಿಹಾರ ಒದಗಿಸಿದ್ದಾರೆ. ಈ ಕರಡು ಅಧಿಸೂಚನೆಯ ಬಗ್ಗೆ ಸಾರ್ವಜನಿಕರಿಗೆ ಸಲಹೆ, ಸೂಚನೆ ಸಲ್ಲಿಸಲು ಅವಕಾಶವಿದೆ ಎಂದು ಯಶ್ಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.