ಜಿಲ್ಲೆ

ಶುದ್ಧ ಕುಡಿಯುವ ನೀರು ಪೂರೈಸಿ: ಜಿಲ್ಲಾಧಿಕಾರಿ ಡಾ.ಕುಮಾರ ನಿರ್ದೇಶನ

ಕೆ.ಎನ್.ರಾಘವೇಂದ್ರ

ಮಂಡ್ಯ: ನಗರ ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ರಾಜಿಯಾಗದೆ ಸಾರ್ವಜನಿಕರಿಗೆ ಶುದ್ಧ ಕುಡಿಯುವ ಒದಗಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನಗರಾಭಿವೃದ್ಧಿ ಕೋಶದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ, ಕಳೆದ ಮೂರು ತಿಂಗಳ ಕುಡಿಯುವ ನೀರಿನ ಮಾದರಿಯ ವರದಿಯನ್ನು ಅವಲೋಕಿಸಿ ಸಮಸ್ಯೆ ಇರುವ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳನ್ನು ಸರಿಪಡಿಸಿ ಎಂದರು.

ನಗರ ಪ್ರದೇಶದ ವಸತಿ ರಹಿತ ಪಟ್ಟಿಯನ್ನು ಸಿದ್ಧಪಡಿಸಿ ಆನ್‌ಲೈನ್ ತಂತ್ರಾಂಶಗಳಿಗೆ ಅಪ್‌ಲೋಡ್ ಮಾಡಿ. ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಒಟ್ಟು 974 ಮನೆ ಪೂರ್ಣಗೊಂಡಿದೆ. ಅಂತೆಯೇ 156 ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಕಳೆದ ಒಂದು ತಿಂಗಳಿನಿಂದ 7 ಮನೆಗಳ ಕಾಮಗಾರಿ ಪೂರ್ಣಗೊಂಡಿದೆ. ವಸತಿ ಸಂಬಂಧಿಸಿದ ಯೋಜನೆಗಳ ಕಾಮಗಾರಿಯನ್ನು ವಿಳಂಬ ಮಾಡದೆ ಶೀಘ್ರವಾಗಿ ಪೂರ್ಣಗೊಳಿಸಿ ಎಂದು ಹೇಳಿದರು.

15ನೇ ಹಣಕಾಸು ಆಯೋಗದಲ್ಲಿ ಯಾವುದೇ ಕಾಮಗಾರಿಯ ಟೆಂಡರ್‌ಗಳನ್ನು ಬಾಕಿ ಉಳಿಸಿಕೊಳ್ಳಬೇಡಿ. ಶೀಘ್ರವಾಗಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಿ. ಟೆಂಡರ್‌ಗಳನ್ನು ವಿಳಂಬ ಮಾಡಬೇಡಿ. ನಗರ ತ್ಯಾಜ್ಯ ನಿರ್ವಹಣೆಯನ್ನು ಸೂಕ್ತ ಸಮಯಕ್ಕೆ ವಿಲೇವಾರಿ ಮಾಡಿ. ಆಸ್ತಿ ತೆರಿಗೆ ವಸೂಲಾತಿಯನ್ನು ಕಳೆದ ಸಭೆಗೆ ಹೋಲಿಸಿದರೆ ಒಟ್ಟು ಶೇ.5 ತೆರಿಗೆ ವಸೂಲಾತಿ ಮಾಡಿ ಪ್ರಗತಿ ಸಾಧಿಸಲಾಗಿದೆ. ಪ್ರಗತಿಯನ್ನು ಇನ್ನೂ ಹೆಚ್ಚುಗೊಳಿಸಿ. ನೀರಿನ ಶುಲ್ಕವನ್ನು ವಸೂಲಾತಿ ಶೇಕಡಾವಾರು ಕಡಿಮೆ ಇದ್ದು, ನೀರಿನ ಶುಲ್ಕವನ್ನು ಪಾವತಿಸುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 9 ಇಂದಿರಾ ಕ್ಯಾಂಟೀನ್ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಉತ್ತಮ ಹಾಗೂ ಶುದ್ಧ ಅಹಾರ ಒದಗಿಸುತ್ತಿರುವ ಹಾಗೂ ಇಂದಿರಾ ಕ್ಯಾಂಟೀನ್ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಆಹಾರದ ಗುಣಮಟ್ಟ ಪರೀಶೀಲನೆ ನಡೆಸಿ. ಈಗ ತಿಳಿಸಿರುವ ಕೆಲಸ ಕಾರ್ಯಗಳು ಮುಂದಿನ ಸಭೆ ನಡೆಯುವಷ್ಟರಲ್ಲಿ ಪ್ರಗತಿಯಾಗಿರಬೇಕು. ಅಧಿಕಾರಿಗಳು ವಿಶೇಷ ಕಾಳಜಿ ಮತ್ತು ಮುತುವರ್ಜಿ ವಹಿಸಿ ತಮ್ಮ ಕಾರ್ಯ ದಕ್ಷತೆಯನ್ನು ಹೆಚ್ಚಿಸಿಕೊಳ್ಳಬೇಕು. ಕೆಲಸಗಳಲ್ಲಿ ನಿರ್ಲಕ್ಷೃ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ನರಸಿಂಹಮೂರ್ತಿ, ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರತಾಪ್, ನಗರಸಭೆ ಪೌರಾಯುಕ್ತೆ ಪಂಪಶ್ರೀ, ಪರಿಸರ ಇಂಜಿನಿಯರ್ ರುದ್ರೇಗೌಡ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.