ಜಿಲ್ಲೆ

ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಕೆ.ಎನ್.ರಾಘವೇಂದ್ರ
ಮಂಡ್ಯ: ಬೇಸಿಗೆ ಕಾಲ ಪ್ರಾರಂಭವಾಗುತ್ತಿರುವುದರಿಂದ ಜಿಲ್ಲೆಯಲ್ಲಿ  ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಕ್ರಮಗಳನ್ನು ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ನಗರಾಭಿವೃದ್ಧಿ ಕೋಶದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನೀರು ಬಳಕೆಯ ಶುಲ್ಕವನ್ನು ಶೇ.13 ರಷ್ಟು ಜನರು  ಮಾತ್ರ ಪಾವತಿಸಿದ್ದಾರೆ. ಬಳಕೆದಾರರು ನೀರಿಗೆ ಶುಲ್ಕ ಪಾವತಿಸದಿದ್ದಲ್ಲಿ ವಸೂಲಾತಿಗೆ ಕ್ರಮ ವಹಿಸಿ.  ಬೇಸಿಗೆಯಲ್ಲಿ ಒದಗಿಸಲಾಗುವ ನೀರಿನ ಗುಣಮಟ್ಟವನ್ನು ಕಾಲ ಕಾಲಕ್ಕೆ ಸಂಶೋಧನಾ ಕೇಂದ್ರಗಳಿಗೆ ಕಳುಹಿಸಿ ಪರೀಕ್ಷಿಸಿ  ಎಂದು ಹೇಳಿದರು.
2015ರ ಸರ್ವೇಯ ಪ್ರಕಾರ ವಸತಿ ಹಾಗೂ ನಿವೇಶನ ರಹಿತರೆಂದು ಜಿಲ್ಲೆಯಲ್ಲಿ 5,312 ಜನರನ್ನು ಗುರುತಿಸಲಾಗಿದೆ. ಅದರಲ್ಲಿ 4,483 ಅರ್ಹ ಫಲಾನುಭವಿಗಳಿದ್ದಾರೆ. ಪ್ರಸ್ತುತ ನಗರದಲ್ಲಿ ಸರ್ಕಾರಿ ನಿವೇಶನಗಳು ಲಭ್ಯ ಇರುವುದಿಲ್ಲದ ಕಾರಣ ಅರ್ಹ ಫಲಾನುಭವಿಗಳಿಗೆ ಪರ್ಯಾಯ ವ್ಯವಸ್ಥೆ ರೂಪಿಸಿ ಎಂದು ತಿಳಿಸಿದರು.
ವಸತಿ ಹಾಗೂ ನಿವೇಶನ ರಹಿತರ ಪಟ್ಟಿಯನ್ನು ಸೂಕ್ತವಾಗಿ ಪರಿಶೀಲಿಸಿ, ನಿವೇಶನ ರಹಿತರು ಮತ್ತು ವಸತಿ ರಹಿತರ ಪ್ರತ್ಯೇಕ ಪಟ್ಟಿಯನ್ನು ಮುಂದಿನ ಸಭೆಗೆ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಿ ಮುಂದಿನ ಸಭೆಯಲ್ಲಿ ಸಲ್ಲಿಸಬೇಕು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಒಳಪಡುವ ಈಗಾಗಲೇ ದುರಸ್ಥಿಗೊಂಡಿರುವ ಸಾರ್ವಜನಿಕ ಹಾಗೂ ಸಮುದಾಯದ ಶೌಚಗೃಹವನ್ನು ಯಾವುದೇ ವಿಳಂಬ ಮಾಡದೆ ಶ್ರೀಘವಾಗಿ ಪ್ರಾರಂಭಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಇ-ಆಸ್ತಿಯಲ್ಲಿ ನೋಂದಣಿ ಕಡಿಮೆ ಪ್ರಮಾಣದಲ್ಲಿರುವುದು ಗಮನಕ್ಕೆ ಬಂದಿರುತ್ತದೆ. ಸಾರ್ವಜನಿಕರಿಗೆ ಇ-ಆಸ್ತಿಯಲ್ಲಿ  ತಮ್ಮ ಆಸ್ತಿಗಳನ್ನು ನೋಂದಾಯಿಸಿಕೊಳುವಂತೆ ಅಧಿಕಾರಿಗಳು ಜಾಗೃತಿ ಮೂಡಿಸಿ. ಇ-ಆಸ್ತಿಯಲ್ಲಿ ನೋಂದಾಯಿಸಿಕೊಳ್ಳುವಂತೆ ಮಾಡಬೇಕು. ಇಲ್ಲವಾದಲ್ಲಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜಾರಿಗೊಳಿಸಲಾಗುವುದು ಎಂದು ಎಚ್ಚರಿಸಿದ ಡಿಸಿ, ಸರ್ಕಾರಿ ಅಂಗಡಿ ಮಳಿಗೆಗಳ ಬಾಡಿಗೆಯನ್ನು ವರ್ಷಗಳಿಂದಲೂ ಪಾವತಿಸದೇ ಇರುವವರಿಗೆ ನೋಟಿಸ್ ಜಾರಿ ಮಾಡಿ. ಅಂಗಡಿಯ ಮಾಲೀಕರು ಮಳಿಗೆಗಳ ಬಾಡಿಗೆಯನ್ನು ಪಾವತಿ ಮಾಡದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಜಾರಿಗೊಳಿಸಿ ಎಂದು ಹೇಳಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಒಳಪಡುವ ಅಧಿಕೃತ ಜಾಹೀರಾತು ಫಲಕಗಳಿಗೆ ಸೂಕ್ತ ಶುಲ್ಕ ವಿಧಿಸಿ. ನಿಗಧಿತ ಜಾಹೀರಾತು ಶುಲ್ಕವನ್ನು ವಸೂಲಾತಿ ಮಾಡಿ. ಸ್ವಚ್ಛ ಭಾರತ್ ಅಭಿಯಾನದಡಿ ಸರಿಯಾದ ವೈಜ್ಞಾನಿಕ ಕ್ರಮ ಅನುಸರಿಸಿ ಹಸಿ ಕಸ ಮತ್ತು ಒಣ ಕಸವನ್ನು  ಬೇರ್ಪಡಿಸಿ ವಿಲೇವಾರಿ ಮಾಡಿ ಎಂದು ಹೇಳಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶಾಧಿಕಾರಿ ಮಾಯಣ್ಣಗೌಡ, ನಗರಾಭಿವೃದ್ಧಿ  ಕಾರ್ಯಪಾಲಕ ಇಂಜಿನಿಯರ್ ಆರ್.ಪ್ರತಾಪ್,  ನಗರಸಭೆ ಪೌರಾಯುಕ್ತೆ ಯು.ಪಿ.ಪಂಪಾಶ್ರೀ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳಾದ ಮೇಘಾ, ರುದ್ರೇಗೌಡ, ರವಿಕುಮಾರ್ ಇತರರಿದ್ದರು.