ಜಿಲ್ಲೆ

ನಗರ ಸ್ವಚ್ಚತೆ ಬಿಬಿಎಂಪಿಯ ಪ್ರಮುಖ ಜವಾಬ್ದಾರಿ: ಸುರಳ್ಕರ್ ವಿಕಾಸ್ ಕಿಶೋರ್ ಹೇಳಿಕೆ

ಬೆಂಗಳೂರು: ನಗರ ಸ್ವಚ್ಚತೆ ಕಾಪಾಡುವುದು ಪಾಲಿಕೆಯ ಪ್ರಮುಖ ಜವಾಬ್ದಾರಿ ಆಗಿದ್ದು, ಈ ನಿಟ್ಟಿನಲ್ಲಿ ಘನತ್ಯಾಜ್ಯ ನಿರ್ವಹಣೆ ವಿಭಾಗ ಮತ್ತು ಅದರ ಕೆಲಸಗಾರರು ಕೂಡ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಬಿಬಿಎಂಪಿ ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.

ರಾಜ್ಯ ಪೌರಕಾರ್ಮಿಕ ಮತ್ತು ಸಫಾಯಿ ಕರ್ಮಚಾರಿಗಳ ವರ್ಕರ್ಸ್ ಯುನಿಯನ್ ವತಿಯಿಂದ ನಗರದ ಪುರಭವನದಲ್ಲಿ ಬುಧವಾರ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಯ ಟಿಪ್ಪರ್ ಮತ್ತು ಕಾಂಪ್ಯಾಕ್ಟರ್ ಚಾಲಕ, ಸಹಾಯಕ ಮತ್ತು ಲೋಡರ್ಸ್‌ಗಳ ಪ್ರಥಮ ಸಮಾವೇಶಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಸ್ವಚ್ಛತಾ ಕಾರ್ಯವನ್ನು ಘನತ್ಯಾಜ್ಯ ನಿರ್ವಹಣಾಗಾರರು ಶ್ರದ್ದೆಯಿಂದ ನಿತ್ಯವೂ ಕೆಲಸ ನಿರ್ವಹಿಸಿ ನಗರದ ನಾಗರಿಕರ ಆರೋಗ್ಯ ಸುರಕ್ಷತೆ ಕಾಪಾಡುತ್ತಿದ್ದೀರಿ. ಅದರಂತೆ, ತಾವು ಕೂಡ ತಮ್ಮ ಆರೋಗ್ಯದ ಕಡೆ ಗಮನ ಹರಿಸಿ ಪಾಲಿಕೆಯ ವತಿಯಿಂದ ಒದಗಿಸುವ ಸುರಕ್ಷಿತ ಸಾಮಾಗ್ರಿಗಳನ್ನು ಸೂಕ್ತ ರೀತಿಯಲ್ಲಿ ಬಳಸಿ ಆರೋಗ್ಯ ಕಾಳಜಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಸ್ವಚ್ಚತಾ ಡಾಕ್ಟರ್ !:

ವಿಶೇಷ ಆಯುಕ್ತ ಕರೀಗೌಡ ಮಾತನಾಡಿ, ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಚತಾ ಡಾಕ್ಟರ್‌ಗಳೆಂದರೆ ಘನತ್ಯಾಜ್ಯ ನಿರ್ವಹಣಾಗಾರರು. ಈ ಕೆಲಸವನ್ನು ಜವಾಬ್ದಾರಿಯಿಂದ ಮಾಡುತ್ತಿರುವುದು ಶ್ಲಾಘನೀಯ. ನಿತ್ಯವೂ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಗ್ರಹಿಸಿ ಸಾಗಣೆ ಮಾಡುವ ಕಾರ್ಯ ನಿರ್ವಹಿಸುತ್ತಿರುವುದು ಶ್ರೇಷ್ಠ ಕೆಲಸ. ಇದರಿಂದಾಗಿ ನಗರದ ಆರೋಗ್ಯ ಕಾಪಾಡಿಡುವಂತಾಗಿದ್ದು, ಜನರ ಬದುಕಿಗೆ ರಕ್ಷಣೆ ನಿಡಿದಂತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ದಿ ಬೆಂಗಳೂರು ಸಿಟಿ ಕಾರ್ಪೊರೇಷನ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಡಾ. ಬಾಬು, ಕಾರ್ಮಿಕ ಸಮುದಾಯದ ಮಾರ್ಗದರ್ಶಕ ಭೀಮಜ್ಯೋತಿ ಶ್ರೀನಿವಾಸ್, ಕೆಎಸ್‌ಪಿಎಸ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಗಂಗಾಧರ್ ಉಪಸ್ಥಿತರಿದ್ದರು.