ಕೂಡ್ಲಿಗಿ ಊರಮ್ಮ ದೇವಿ ದೇವಸ್ಥಾನದ ಹೊರನೋಟ. 
ಜಿಲ್ಲೆ

ಊರಮ್ಮ ದೇವಿ ಜಾತ್ರೆ ಇಂದಿನಿಂದ

Kopala - Desk - Eraveni

ಕೂಡ್ಲಿಗಿ: ಊರಮ್ಮ ದೇವಿ ಜಾತ್ರೆಗೆ ಪಟ್ಟಣ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಪಟ್ಟಣದ ಮುಖ್ಯ ಮಹಾದ್ವಾರಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಜಾತ್ರಾ ಮಹೋತ್ಸವ 20ರಿಂದ 24ರವರೆಗೆ ವಿಜೃಂಭಣೆಯಿಂದ ಜರುಗಲಿದೆ.

20ರಂದು ವೈಶಾಖ ಬಹುಳ ಅಷ್ಟಮಿ ದಿನ ಊರಮ್ಮ ದೇವಿಗೆ ಹೂವು, ಹಣ್ಣು ನೈವೇದ್ಯ ಅರ್ಪಿಸಲಾಗುತ್ತದೆ. ಜೀನಗಾರ ಮನೆಯಿಂದ ತೊಟ್ಟಿಲು ತರುವುದು, ರಾತ್ರಿ 7:30ರಿಂದ ದೇವಿ ಮೂರ್ತಿಯನ್ನು ಹೊಳೆಗೆ ಹೊರಡಿಸಿ, ಗಂಗಾ ಪೂಜೆ ನೆರವೇರಿಸಲಾಗುತ್ತದೆ. ನಂತರ ಚೌಕಿ ಮನೆಯಲ್ಲಿ ಪ್ರತಿಷ್ಠಾಪಿಸಿ, ಉಡಿಅಕ್ಕಿ ಹಾಕಿ ಪೂಜೆ, ಮಂಗಳಾರತಿ ನೆರವೇರಿಸಲಾಗುತ್ತದೆ. ನಂತರ ಮೆರವಣಿಗೆ ಮೂಲಕ ರಂಗ ಮಂಟಪಕ್ಕೆ ತರಲಾಗುತ್ತದೆ.

ಬೆಳಗಿನ ಜಾವ 4 ಗಂಟೆಗೆ ಪಟ್ಟಣದ ಸುತ್ತ ಚರಗ ಚೆಲ್ಲಲಾಗುತ್ತದೆ. 21ರಂದು ದೇವಿಯ ತವರು ಮನೆಯಾದ ಅಮರದೇವರ ಗುಡ್ಡದಲ್ಲಿ ದೈವಸ್ಥರಿಂದ ಹೂವು, ಹಣ್ಣು-ಕಾಯಿ, ಉಡಿ ತುಂಬುವ ಕಾರ್ಯ ನಡೆಯಲಿದೆ. 22ರಂದು ಬೆಳಗ್ಗೆ ತೊಟ್ಟಿಲು ಪೂಜೆ, ಮಧ್ಯಾಹ್ನ ಘಟ್ಟ ವಿಸರ್ಜನೆ, ಸಂಜೆ 5ರಿಂದ ಊರಮ್ಮ ದೇವಿ ಮಹಾ ರಥೋತ್ಸವ ಜರುಗುತ್ತದೆ. 23ರಂದು ಬೆಳಗ್ಗೆ 10ಗಂಟೆಯಿಂದ ಸಂಜೆವರೆಗೆ ವಿವಿಧ ಮನರಂಜನ ಕಾರ್ಯಕ್ರಮ ಸಂಗೀತ, ಕೋಲಾಟ ಇತರ ಕಾರ್ಯಕ್ರಮಗಳು ಜರುಗಲಿವೆ.

24ರಂದು ಬೆಳಗ್ಗೆ 12ಯಿಂದ ಸಂಜೆವರೆಗೆ ಜಂಗಿ ಕುಸ್ತಿ ಸ್ಪರ್ಧೆ ನಡೆಯಲಿದ್ದು, ಗೆದ್ದ ಪೈಲ್ವಾನರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಜೂನ್ 10ರಂದು ದೇವಿಯ ಮರುದೀಪ ಕಾರ್ಯಕ್ರಮ ನಡೆಸಲಾಗುವುದು. ಪಟ್ಟಣದಲ್ಲಿ 15 ವಷರ್ಗಳ ನಂತರ ನಡೆಯುತ್ತಿರುವ ಊರಮ್ಮದೇವಿಯ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ, ಪಟ್ಟಣದ ಮದಕರಿ ವೃತ್ತದ ಬಳಿ ಬೃಹತ್ ಆಕಾರದ ಮಹಾದ್ವಾರ ನಿರ್ಮಿಸಲಾಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ಪಟ್ಟಣದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿದೆ.