ಜಿಲ್ಲೆ

ಮೇಲ್ದರ್ಜೆ ಭಾಗ್ಯವಿಲ್ಲದ ಶಿರಹಟ್ಟಿ ಉಪ ಮಾರುಕಟ್ಟೆ !

ರವಿ ಎಸ್. ಬಳೂಟಗಿ

ಉದಯಕುಮಾರ ಹಣಗಿ
ತಾಲೂಕು ಕೇಂದ್ರವಾಗಿ ಶಿರಹಟ್ಟಿ ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ವ್ಯಾಪಾರ, ವಹಿವಾಟು, ಕೃಷಿ ಚಟುವಟಿಕೆಗಳು ದಿನದಿಂದ ದಿನಕ್ಕೆ ಏರುಮುಖವಾಗಿವೆ. ಆದರೆ. ಕೃಷಿ ಉತ್ಪನ್ನಗಳ ಮಾರಾಟದ ಕೇಂದ್ರಬಿಂದುವಾದ ಉಪ ಮಾರುಕಟ್ಟೆ ಮೇಲ್ದರ್ಜೆಗೇರದ ಕಾರಣ ರೈತರು ಸಮಸ್ಯೆ ಎದುರಿಸಬೇಕಾಗಿದೆ.
ಶಿರಹಟ್ಟಿ ಎಪಿಎಂಸಿಗೆ ಈಗಲೂ ಉಪ ಮಾರುಕಟ್ಟೆ ಎಂಬ ಹಣೆಪಟ್ಟಿ ಕಟ್ಟಿ ಸರ್ಕಾರ ಸುಮ್ಮನೆ ಕೂರಿಸಿದೆ. ಯಾವುದೇ ವ್ಯಾಪಾರ ಸುಗಮವಾಗಿ ಸಾಗದೆ ಸಮಸ್ಯೆಗಳೇ ತುಂಬಿಕೊಂಡಿವೆ. ಲಕ್ಷ್ಮೇಶ್ವರ ಮಾರುಕಟ್ಟೆಯೇ ವಹಿವಾಟಿಗೆ ಸೂಕ್ತ ಎನ್ನುವಂತಾಗಿದೆ.
ಪಟ್ಟಣದ ಬಸ್ ನಿಲ್ದಾಣದಿಂದ ತಹಶೀಲ್ದಾರ್ ಕಚೇರಿ ವರೆಗೂ 20 ಎಕರೆ ಪ್ರದೇಶದಲ್ಲಿ ಎಪಿಎಂಸಿ ಉಪ ಮಾರುಕಟ್ಟೆ ನಿರ್ಮಾಣವಾಗಿದೆ. 30 ವರ್ಷದಿಂದ ಇದು ಉಪ ಮಾರುಕಟ್ಟೆಯಾಗಿಯೇ ಉಳಿದಿದೆ. ತಾಲೂಕಿನ ರೈತರು ಹೆಸರು, ಗೋವಿನಜೋಳ ಸಮೃದ್ಧವಾಗಿ ಬೆಳೆಯುತ್ತಾರೆ. ಉಪ ಮಾರುಕಟ್ಟೆ ಉತ್ಪಗಳನ್ನು ರಿಯಾಯಿತಿ ಹಾಗೂ ಕಡಿಮೆ ಶುಲ್ಕದಲ್ಲಿ ಸಂಗ್ರಹ ಮಾಡಿಕೊಳ್ಳಲು ಉಗ್ರಾಣದ ವ್ಯವಸ್ಥೆ ಇಲ್ಲ. ರೈತರು ಬಂದಷ್ಟು ಬೆಲೆಗೆ ಉತ್ಪನ್ನಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಾರೆ. ಕೆಲವರು ದೂರದ ಊರಿಗೆ ಹೋಗಿ ದವಸ-ಧಾನ್ಯಗಳನ್ನು ಮಾರಾಟ ಮಾಡಿ ಬರುತ್ತಾರೆ.
ಎಪಿಎಂಸಿಯ ವಾಣಿಜ್ಯ ಕಟ್ಟಡಗಳಿಂದ ಪ್ರತಿ ತಿಂಗಳು ಅಂದಾಜು 3 ಲಕ್ಷ ರೂ. ಆದಾಯ ಬರುತ್ತಿದೆ. ಆವರಣದಲ್ಲಿ ಸಾಕಷ್ಟು ಸ್ಥಳಾವಕಾಶವೂ ಇದೆ. ಪ್ರಮುಖ ವ್ಯಾಪಾರ ಪ್ರಾರಂಭಿಸಲು ಅಚ್ಚುಕಟ್ಟು ಸ್ಥಳವಾಗಿದೆ. ಆದರೆ, ಸರ್ಕಾರ ಮತ್ತು ಪ್ರತಿನಿಧಿಗಳು ಗಮನಹರಿಸದೆ ಅವ್ಯವಸ್ಥೆ ಮನೆಮಾಡಿದೆ. ಮಾರುಕಟ್ಟೆ ಪ್ರಾಂಗಣದಲ್ಲಿ ಶುಚಿತ್ವ ಮಾಯವಾಗಿದೆ. ಗಿಡ ಗಂಟೆಗಳು ಸಮೃದ್ಧಿಯಾಗಿ ಬೆಳೆದಿವೆ. ಬಸ್ ನಿಲ್ದಾಣದ ಕಾಂಪೌಂಡ್ ಗೋಡೆ ಮತ್ತು ಎಪಿಎಂಸಿ ಬಯಲು ಪ್ರದೇಶ ಬೆಳಗ್ಗೆ ಬಯಲು ಶೌಚಗೃಹವಾಗಿರುತ್ತದೆ. ಇದರಿಂದ ದುರ್ವಾಸನೆ ಸಹಿಸಲು ಆಗುತ್ತಿಲ್ಲ.
ಎಪಿಎಂಸಿ ಮಾರುಕಟ್ಟೆ ಉತ್ತಮ ಸ್ಥಿತಿಯಲ್ಲಿದ್ದರೆ ಉಳಿದ ಕೈಗಾರಿಕೆ, ಸಣ್ಣ ಕೈಗಾರಿಕೆ ಮತ್ತು ಸ್ಥಳೀಯರು ವ್ಯಾಪಾರದಲ್ಲಿ ತೊಡಗುತ್ತಾರೆ. ಉದ್ಯೋಗಗಳು ಸೃಷ್ಟಿಯಾಗುತ್ತವೆ. ಆದರೆ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಉಪಮಾರುಕಟ್ಟೆ ಏಳಿಗೆಯನ್ನೇ ಕಾಣುತ್ತಿಲ್ಲ ಎಂಬ ನೋವು ಪಟ್ಟಣದ ಪ್ರಜ್ಞಾವಂತ ಜನರದು.

ರೈತರಿಗಾಗಿ ಆರಂಭವಾಗಿರುವ ಉಪಮಾರುಕಟ್ಟೆ ಅವ್ಯವಸ್ಥೆ ರೂಪ ಪಡೆದುಕೊಳ್ಳುತ್ತಿದೆ. ಆದಷ್ಟು ಬೇಗ ಉಪ ಮಾರುಕಟ್ಟೆ ಅಭಿವೃದ್ಧಿ ಪಡಿಸಬೇಕಿದೆ. ಇಲ್ಲಿರುವ ಸೌಲಭ್ಯಗಳನ್ನು ರೈತರು ಮತ್ತು ವ್ಯಾಪಾರಿರು ಉಪಯೋಗಿಸಲು ಆಗುವಂ ವಾತಾವರಣವನ್ನು ಅಧಿಕಾರಿಗಳು ಸೃಷ್ಟಿಸಬೇಕಾಗಿದೆ.-ನಾಗರಾಜು ಲಕ್ಕುಂಡಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಶಿರಹಟ್ಟಿ ಎಪಿಎಂಸಿಯಲ್ಲಿ ಹಲವು ಬದಲಾವಣೆ ತರಲು ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮಾರುಕಟ್ಟೆ ನಿರ್ಮಿಸಲು ಪ್ರಯತ್ನ ನಡೆಸಲಾಗುತ್ತಿದೆ.-ಫಕೀರೇಶ ರಟ್ಟಿಹಳ್ಳಿ, ಪಪಂ ಸದಸ್ಯ