ತುಮಕೂರು: ಶಿಕ್ಷಣದ ಮೂಲಕ ವಿದ್ಯಾರ್ಥಿಗಳು ವಿಮರ್ಶಾತ್ಮಕ ಚಿಂತನೆ ಹಾಗೂ ವಿಶ್ಲೇಷಣಾತ್ಮಕ ಚಿಂತನಾ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್ ಅಕಾಡೆಮಿ ಸಂಸ್ಥಾಪಕ ನಿರ್ದೇಶಕ ಜಿ.ಬಿ.ವಿನಯ್ ಕುಮಾರ್ ಹೇಳಿದರು.
ನಗರದ ಕೇಂದ್ರ ಗ್ರಂಥಾಲಯದಲ್ಲಿ ಗುರುವಾರ ವಿದ್ಯಾನಿಧಿ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ ಐಎಎಸ್ ಓರಿಯೆಂಟೇಷನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಂಡು ಪ್ರಶ್ನೆಗಳನ್ನು ಕೇಳುವುದನ್ನು ವಿದ್ಯಾರ್ಥಿಗಳು ಕಲಿಯಬೇಕು ಎಂದರು.
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾದರೆ ತರ್ಕಬದ್ಧವಾಗಿ ಉತ್ತರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳು ಮಕ್ಕಳಲ್ಲಿನ ಸೃಜನಶೀಲತೆಯನ್ನು ಕಮರಿಸುತ್ತಿವೆ. ಪುಸ್ತಕಗಳನ್ನು ಓದುವುದರಿಂದ ದೊರೆತ ಜ್ಞಾನವನ್ನು ಗೂಗಲ್ ನೀಡಲು ಸಾಧ್ಯವಿಲ್ಲ ಎಂಬುದರ ಅರಿವು ವಿದ್ಯಾರ್ಥಿಗಳಿಗಿರಬೇಕು ಎಂದು ಎಚ್ಚರಿಸಿದರು.
ಐಎಎಸ್, ಐಪಿಎಸ್ ಮೊದಲಾದ ಯುಪಿಎಸ್ಸಿ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ನೋಟ ವಿಸ್ತರವಾದಷ್ಟೂ ಅವಕಾಶಗಳು ಗೋಚರಿಸುತ್ತವೆ. ನಿರಂತರವಾದ ಓದು, ಅವಿರತ ಪರಿಶ್ರಮ, ಸಾಧನೆಯ ಗುರಿ ಹೊಂದಿರುವಂಥ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಸಲಹೆನೀಡಿದರು.
ಲೋಕಸೇವಾ ಆಯೋಗದ ಪರೀಕ್ಷೆಗಳೆಂದರೆ ಕಠಿಣವೆಂಬ ಭಾವನೆ ನಮ್ಮಲ್ಲಿದೆ. ಅದನ್ನು ತೊಡೆದುಹಾಕಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಪಣ ತೊಡಿ. ಪ್ರಾಮಾಣಿಕ ಪರಿಶ್ರಮಕ್ಕೆ ಸಲ್ಲಬೇಕಾದ ಪ್ರತಿಫಲ ಖಂಡಿತಾ ದೊರಕುತ್ತದೆ ಎಂದು ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ಟಿ.ಎನ್.ಮಧುಕರ್ ತಿಳಿಸಿದರು.
ವಿದ್ಯಾನಿಧಿ ಕಾಲೇಜಿನ ಪ್ರಾಂಶುಪಾಲ ಸಿದ್ದೇಶ್ವರ ಸ್ವಾಮಿ ಉಪಸ್ಥಿತರಿದ್ದರು. ಸೂರಜ್‌ಕೃಷ್ಣ ಪ್ರಾರ್ಥಿಸಿ, ಎಂ.ಎಸ್.ಹೇಮಲತಾ ಸ್ವಾಗತಿಸಿದರು. ಸಹನಾ ವಂದಿಸಿದರು. ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿದರು.