ಹನೂರು: ಸಮುದಾಯದ ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ಎಲ್ಲ ವಿದ್ಯಾರ್ಥಿಗಳಿಗೆ ಫೌಂಡೇಷನ್ ವತಿಯಿಂದ ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗೆ ನೀಡುತ್ತಿರುವ ತರಬೇತಿಯ ಪ್ರಯೋಜನ ಪಡೆದುಕೊಳ್ಳಿ ಎಂದು ಮೈಸೂರು ದೇವರತ್ನ ಫೌಂಡೇಷನ್ ಅಧ್ಯಕ್ಷ ಶಿವಪ್ರಸಾದ್ ತಿಳಿಸಿದರು.
ಪಟ್ಟಣದ ಡಾ.ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿ ಶೈಕ್ಷಣಿಕ ಪ್ರಗತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಸಂಬಂಧ ಶುಕ್ರವಾರ ಆಯೋಜಿಸಿದ್ದ ವಿದ್ಯಾರ್ಥಿಗಳು ಹಾಗೂ ಪಾಲಕರ ಸಭೆಯಲ್ಲಿ ಮಾತನಾಡಿದರು.
ಯಾವುದೇ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಆದರೆ, ಸಮುದಾಯದ ಪಾಲಕರಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಕಡಿಮೆ ಇದ್ದು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ. ಸಮಾಜದಲ್ಲಿ ಹಿಂದುಳಿಯಬೇಕಾದ ಸ್ಥಿತಿ ಇದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಮನದಟ್ಟು ಮಾಡಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ಗಮನ ನೀಡಬೇಕು. ಇದರಿಂದ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಹಾಗೆಯೇ ಸಮುದಾಯವು ಅಭಿವೃದ್ಧಿ ಹೊಂದುತ್ತದೆ ಎಂದು ಸಲಹೆ ನೀಡಿದರು.
ಫೌಂಡೇಷನ್ ವತಿಯಿಂದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಯುಪಿಎಸ್‌ಸಿ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪುಸ್ತಕಗಳನ್ನು ನೀಡಲಾಗುತ್ತಿದ್ದು ಇದೀಗ ತರಬೇತಿಯನ್ನು ನೀಡಲಾಗುತ್ತಿದೆ. ತರಬೇತಿ ಪಡೆದ 30 ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ತರಬೇತಿಯ ಪ್ರಯೋಜನ ಪಡೆದುಕೊಳ್ಳಬೇಕು. ಜತೆಗೆ ಶಿಕ್ಷಣ ಪಡೆಯಲು ಸಮಸ್ಯೆ ಇದ್ದಲ್ಲಿ ನೇರವಾಗಿ ಸಂಪರ್ಕಿಸಿ. ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಸಮುದಾಯದ ಮುಖಂಡರು ಶಿವಪ್ರಸಾದ್ ಅವರನ್ನು ಸನ್ಮಾನಿಸಿದರು. ಪಟ್ಟಣ ಪಂಚಾಯಿತಿ ಸದಸ್ಯ ಸುದೇಶ್, ಮುಖಂಡರಾದ ರಾಚಯ್ಯ, ರಾಜಶೇಖರ್, ಸಿದ್ದರಾಜು, ಪ್ರವೀಣ್, ದೊರೆಸ್ವಾಮಿ, ಸಿದ್ದಪ್ಪ, ಶಿವಕುಮಾರ್, ಮಾದಪ್ಪ, ವೆಂಕಟಮಾದ, ಮಾದೇವ, ರೇವಣ್ಣ ಇದ್ದರು.