ಹೊಸಪೇಟೆ ನಗರಸಭೆ ಸಾಮಾನ್ಯ ಸಭೆಯಲ್ಲಿ ವಾಕ್ಸಮರ
ಕಾಂಗ್ರೆಸ್ ಸದಸ್ಯರ ಮಾತಿಗೆ ಬಿಜೆಪಿ ಕೆಂಡಾಮAಡಲ
ಹೊಸಪೇಟೆ: ವಿಜಯನಗರ ಕ್ಷೇತ್ರದ ಶಾಸಕರಾಗಿ ಎಚ್.ಆರ್.ಗವಿಯಪ್ಪ ಆಯ್ಕೆಯಾಗಿದ್ದರಿಂದ ನಗರಸಭೆಯಲ್ಲಿ ಕೆಲಸ ಕಾರ್ಯಗಳು ಸುಗಮವಾಗಿವೆ ಎಂಬ ಕಾಂಗ್ರೆಸ್ ಸದಸ್ಯರ ಮಾತು ನಗರಸಭೆ ಸಾಮಾನ್ಯ ಸಭೆಯಲ್ಲಿ ಕೋಲಾಹಲ ಸೃಷ್ಟಿಸಿತು.
ನಗರಸಭೆ ಅಧ್ಯಕ್ಷೆ ಎ.ಲತಾ ಅಧ್ಯಕ್ಷತೆಯಲ್ಲಿ ಸೋಮವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆ ಇನ್ನೇನು ಮುಕ್ತಾಯಗೊಳ್ಳಲಿದೆ ಎನ್ನುವಷ್ಟರಲ್ಲಿ ೨೦ನೇ ವಾರ್ಡ್ನ ಸದಸ್ಯ ಕೆ. ಮಹೇಶ ಕುಮಾರ್ ಮಾತನಾಡಿ, ವಿಜಯನಗರ ಕ್ಷೇತ್ರದಿಂದ ಎಚ್.ಆರ್.ಗವಿಯಪ್ಪ ಆಯ್ಕೆಯಾಗಿದ್ದರಿಂದ ನಗರಸಭೆಯ ಎಲ್ಲ ಕೆಲಸ ಗಳು ಸುಗಮವಾಗಿವೆ. ಫಾರಂ ನಂ.೩ ಏಳು ದಿನಗಳಲ್ಲಿ ಜನರ ಕೈಸೇರುತ್ತಿದೆ ಎಂದರು.
ಅದಕ್ಕೆ ಆಕ್ಷೇಪಿಸಿದ ನಗರಸಭೆ ಉಪಾಧ್ಯಕ್ಷ ರೂಪೇಶ್ ಕುಮಾರ್ ಸೇರಿದಂತೆ ಬಿಜೆಪಿ ಸದಸ್ಯರಾದ ಜೀವರತ್ನಂ, ಆನಂದ ಎಲ್.ಎಸ್., ಶೇಕ್ಷಾವಲಿ, ರಮೇಶ್ ಗುಪ್ತಾ ಮತ್ತಿತರರು ತೀವ್ರವಾಗಿ ವಿರೋಧಿಸಿದರು. ಇದರಿಂದ ಕೆಲಕಾಲ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ಅರ್ಥವಾಗದಷ್ಟು ಗದ್ದಲ ಸೃಷ್ಟಿಯಾಯಿತು.
ಬಳಿಕ ಬಿಜೆಪಿ ಸದಸ್ಯರ ಪೈಕಿ ಕೆಲವರು ಹಿಂದಿನ ಶಾಸಕ ಆನಂದ ಸಿಂಗ್ ಅವರಿಂದಲೇ ಅಭಿವೃದ್ಧಿಯಾಗಿದೆ ಎಂದು ಸಮರ್ಥಿಸಿಕೊಂಡರೆ, ಮತ್ತಿತರರು ನಗರಸಭೆಗೆ ಈಗಿನ ಶಾಸಕರು ಕಾಲೇ ಇಟ್ಟಿಲ್ಲ. ಹೀಗಾಗಿ ಆಡಳಿತದಲ್ಲಿ ಸುಧಾರಣೆಯಾಗಿದ್ದರೆ, ಅದರ ಕೀರ್ತಿ ಪೌರಾಯುಕ್ತ ಮನೋಹರ್ ನಾಗರಾಜ್‌ಗೆ ಸಲ್ಲುತ್ತದೆ. ಇಲ್ಲಿನ ಅಧಿಕಾರಿ, ಸಿಬ್ಬಂದಿಗಳೇ ಅದಕ್ಕೆ ಕಾರಣವೆಂದು ಸರ್ಕಾರದ ಕಾರ್ಯಾಂಗಕ್ಕೆ ಬಹುಪರಾಕ್ ಹೇಳಿ, ಅಂತ್ಯ ಹಾಡಿದರು.