ಜಿಲ್ಲೆ

ಲೋಕೂರು ದ್ಯಾಮವ್ವ-ದುರ್ಗವ್ವ ಜಾತ್ರೆ

ಉಪ್ಪಿನಬೆಟಗೇರಿ: ಸಮೀಪದ ಲೋಕೂರು ಗ್ರಾಮದಲ್ಲಿ ದ್ಯಾಮವ್ವ-ದುರ್ಗವ್ವ ಜಾತ್ರೆ ಅ. 15 ರಿಂದ ಆರಂಭವಾಗಿದ್ದು, 25ರವರೆಗೆ ನಡೆಯಲಿದೆ.
ದೇವಿಯರಿಗೆ ಪ್ರತಿದಿನ ಎರಡು ಬಾರಿ ಪೂಜೆ ನಡೆಯುತ್ತದೆ. ಸಂಜೆ ಭಜನೆ, ದೇವಿ ಪುರಾಣ, ಆರಾಧನೆ, ನಾಮಸ್ಮರಣೆ ನಿರಂತರವಾಗಿ ನಡೆಯುತ್ತವೆ.
ಖಂಡೆ ಪೂಜೆ: ಅ. 23ರ ಖಂಡೆ ಪೂಜೆಯಂದು ಶ್ರೀದೇವಿಯರ ಪಲ್ಲಕ್ಕಿಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡುತ್ತ ತುಪ್ಪರಿಹಳ್ಳಕ್ಕೆ ತೆರಳುತ್ತಾರೆ. ಅಲ್ಲಿ ದೇವಿಯ ಆಯುಧಗಳನ್ನು ಪೂಜೆ ಮಾಡಿ ಬರುತ್ತಾರೆ. ಪಲ್ಲಕ್ಕಿ ಗ್ರಾಮ ಪ್ರವೇಶಿಸುತ್ತಿದ್ದಂತೆ ಭಕ್ತರು ನಾಣ್ಯ, ಉತ್ತತ್ತಿ, ಬೆಂಡು, ಬೆತ್ತಾಸಗಳನ್ನು ಪಲ್ಲಕ್ಕಿಗೆ ಎಸೆದು ಭಕ್ತಿ ಅರ್ಪಿಸುತ್ತಾರೆ.
ಬನ್ನಿ ಮುಡಿಯುವುದು: ಅ. 24ಕ್ಕೆ ಬನ್ನಿ ಮುಡಿಯುವ ದಿನ ಭಕ್ತರು ದೇವಿಯ ಗುಡಿಗೆ ಆಗಮಿಸಿ ಪಲ್ಲಕ್ಕಿಯನ್ನು ಹೊರಡಿಸುತ್ತಾರೆ. ಪಲ್ಲಕ್ಕಿ ಜತೆಗೆ ರಾಯಚೋಟಿ ಶ್ರೀ ವೀರಭದ್ರೇಶ್ವರ, ಮೌನೇಶ್ವರ, ರೇವಣಸಿದ್ಧೇಶ್ವರರ ನಂದಿಕೋಲು ಹಾಗೂ ಭಕ್ತರು ತಮ್ಮ ಮನೆಯಲ್ಲಿರುವ ಆಯುಧಗಳನ್ನು ತೆಗೆದುಕೊಂಡು ಪಲ್ಲಕ್ಕಿ ಜತೆಗೆ ಗ್ರಾಮದಲ್ಲಿ ಮೆರವಣಿಗೆಯೊಂದಿಗೆ ಬನ್ನಿ ಮಹಾಂಕಾಳಿ ಪಾದಗಟ್ಟೆವರೆಗೆ ತೆರಳುತ್ತಾರೆ. ದೇವಿಗೆ ಪೂಜೆ ಸಲ್ಲಿಸಿ ಬನ್ನಿ ಮುಡಿಯುತ್ತಾರೆ.
ಅ. 25ರಂದು ಕಡೆ ಬನ್ನಿಯ ದಿನ ಕೂಡ ಗ್ರಾಮದ ಎಲ್ಲ ದೇವಸ್ಥಾನಗಳ 12 ಪಲ್ಲಕ್ಕಿಗಳನ್ನು ಹೊತ್ತು ಬನ್ನಿ ಮುಡಿಯಲೆಂದು ಉಪ್ಪಿನಬೆಟಗೇರಿ ರಸ್ತೆಯಲ್ಲಿರುವ ಬನ್ನಿ ಮರಕ್ಕೆ ತೆರಳುತ್ತಾರೆ. ಅಲ್ಲಿ ಪೂಜೆ ಸಲ್ಲಿಸಿದ ನಂತರ ಪಲ್ಲಕ್ಕಿಗಳನ್ನು ಗ್ರಾಮಗಳಲ್ಲಿ ಮೆರವಣಿಗೆ ಮಾಡಿ ಸಂಜೆ ದೇವಸ್ಥಾನಗಳಿಗೆ ಮರಳುತ್ತವೆ. ಅದೇ ದಿನ ಮಧ್ಯಾಹ್ನ ದೇವಸ್ಥಾನದ ಬಳಿ ಜಟ್ಟಿಗಳಿಂದ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ನಡೆಯುತ್ತವೆ.