ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಸತತ ಸೂಚನೆ ಹೊರತಾಗಿಯೂ ಕುಡಿಯುವ ನೀರಿನ ಶುಲ್ಕವನ್ನು ಪಾವತಿಸದ ಗ್ರಾಹಕರಿಗೆ ಅಂಚೆ ಮೂಲಕ ನೋಂದಾಯಿತ ನೋಟಿಸ್ ನೀಡುವ ಮೂಲಕ ಸಂಪರ್ಕ ಕಡಿತಕ್ಕೆ ಅಂತಿಮ ಎಚ್ಚರಿಕೆ ನೀಡಬೇಕೆಂದು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ನೀರು ನೈರ್ಮಲ್ಯ ಸಮಿತಿ ನಿರ್ಣಯಕ್ಕೆ ಅಂಗೀಕಾರ ದೊರೆತಿದೆ.
ಇಲ್ಲಿನ ಗ್ರಾಪಂ ನೀರಿನ ಸಮಿತಿ ಸಭೆ ಸಮಾಜಮಂದಿರದಲ್ಲಿ ಅಧ್ಯಕ್ಷ ಕೆರೆಮೂಲೆ ಅಬ್ದುಲ್ ರಹಿಮಾನ್ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ‌್ಯದರ್ಶಿ ಗೀತಾ ಶೇಖರ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು.
ಬಳಿಕ ಕರ ವಸೂಲಿಗಾರ ಸಿಬ್ಬಂದಿ ಹಳೆಗೇಟು ಪರಿಸರದಲ್ಲಿ ನೀರಿನ ಕರಬಾಕಿ ಇರುವ ಕುರಿತು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಅಧ್ಯಕ್ಷರು ಪ್ರತಿಕ್ರಿಯಿಸಿ ಐದು ತಿಂಗಳಿನಿಂದ ಕರ ಬಾಕಿ ಇರುವ ಬಳಕೆದಾರರಿಗೆ ತಕ್ಷಣ ನೋಟಿಸ್ ನೀಡಿ ಸಂಪರ್ಕ ಕಡಿತಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ವೇತನ ಹೆಚ್ಚಿಸುವಂತೆ ಆಗ್ರಹಿಸಿ ಮನವಿ ನೀಡಿದಾಗ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಅಧ್ಯಕ್ಷರು ತಿಳಿಸಿದರು.
ಅಧ್ಯಕ್ಷರು ಮಾತನಾಡಿ, ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಸಮಿತಿ ರಚನೆ ವೇಳೆ ಕೆಲ ಗ್ರಾಮಸ್ಥರು ಹುಮ್ಮಸ್ಸಿನಿಂದ ಭಾಗವಹಿಸಿ ಒತ್ತಡ ಹೇರುತ್ತಾರೆ. ಆದರೆ ಐದು ತಿಂಗಳು ಕಳೆದು ಒಂದು ಸಭೆ ಕರೆದರೂ ಬಹುತೇಕ ಸದಸ್ಯರು ಗೈರುಹಾಜರಾಗುತ್ತಿರುವ ಮೂಲಕ ನಿರಾಸಕ್ತಿ ತಾಳುತ್ತಿರುವುದು ದುರಾದೃಷ್ಟಕರವಾಗಿದೆ ಎಂದರು.
ಸಮಿತಿ ಉಪಾಧ್ಯಕ್ಷ ಧನಂಜಯ ಕುಮಾರ್ ನಟ್ಟಿಬೈಲು, ಸದಸ್ಯ ಭಾರತಿ, ಚಂದ್ರಾವತಿ ಉಪಸ್ಥಿತರಿದ್ದರು. ಗುಮಾಸ್ತೆ ಜ್ಯೋತಿ ನಿರೂಪಿಸಿದರು.
ಪಂಚಾಯಿತಿ ಆದಾಯಕ್ಕೆ ಧಕ್ಕೆ
ಈಗಾಗಲೇ ಜಲಜೀವನ್ ಯೋಜನೆಯಲ್ಲಿ ನೀರಿನ ಮಾಪಕ ಹಾಗೂ ಗೇಟ್‌ವಾಲ್ವ್‌ಗಳು ಕಳಪೆ ಮಟ್ಟ ಸಲಕರಣೆ ಅಳವಡಿಸಿದ್ದು, ಕೆಟ್ಟು ಹೋಗಿ ಪಂಚಾಯಿತಿ ಆದಾಯಕ್ಕೆ ಧಕ್ಕೆಯಾಗಿದೆ. ಅಲ್ಲದೆ ಈ ಹಿಂದಿನ ಗ್ರಾಪಂ ನೀರು ನಿರ್ವಹಣೆ ನಡೆಸಿದಾಗ ಇಂತಹ ಗೊಂದಲವು ಇರಲಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಸಿ ತಕ್ಷಣ ಸರಿಪಡಿಸಲು ಗುತ್ತಿಗೆದಾರರಿಗೆ ತಿಳಿಸುವಂತೆ ಇಂಜಿನಿಯರ್ ವಿಭಾಗಕ್ಕೆ ಪತ್ರ ಬರೆಯುವಂತೆ ಅಧ್ಯಕ್ಷರು ಸೂಚಿಸಿದರು.