ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ಅಧ್ಯಕ್ಷತೆಯಲ್ಲಿ ಉಪ್ಪಿನಂಗಡಿ ಗ್ರಾಮಸಭೆ ನಡೆಯಿತು. ಡಾ.ದೀಪಕ್ ರೈ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಮುಹಮ್ಮದ್ ತೌಸೀಫ್ ಯು.ಟಿ ಮೊದಲಾದವರಿದ್ದರು. 
ಜಿಲ್ಲೆ

ಚರಂಡಿಯಲ್ಲಿ ಕುಡಿವ ನೀರಿನ ಪೈಪ್ : ಜಲಜೀವನ ಮಿಷನ್ ಕಾಮಗಾರಿ ನಿರ್ಲಕ್ಷ್ಯ : ಉಪ್ಪಿನಂಗಡಿ ಗ್ರಾಮಸಭೆಯಲ್ಲಿ ಅಸಮಾಧಾನ

ಸೌಮ್ಯ ಆರ್

ಉಪ್ಪಿನಂಗಡಿ: ಸತತ ಆಕ್ಷೇಪದ ನಡುವೆಯು ಜಲಜೀವನ ಮಿಷನ್ ಕಾಮಗಾರಿ ತೀರಾ ನಿರ್ಲಕ್ಷ್ಯದಿಂದ ನಡೆಯುತ್ತಿದೆ. ಯೋಜನೆಯಡಿ ನೀರಿನ ಸಂಪರ್ಕದ ಪೈಪ್‌ಗಳನ್ನು ಹೆಚ್ಚಿನ ಕಡೆ ಮಳೆ ನೀರು ಹರಿದು ಹೋಗುವ ಚರಂಡಿಯಲ್ಲೇ ಹಾಕಲಾಗಿದೆ. ಇದರಿಂದಾಗಿ ಚರಂಡಿಯ ಹೂಳು ತೆಗೆಯಲೂ ಅಸಾಧ್ಯವಾಗುತ್ತಿದೆ ಎಂದು ಉಪ್ಪಿನಂಗಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಪಂ ಅಧ್ಯಕ್ಷೆ ಲಲಿತಾ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ, ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರ ಅಸಮಧಾನಕ್ಕೆ ಸಹಮತ ಸೂಚಿಸಿದ ಪಂಚಾಯಿತಿ ಆಡಳಿತ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿತು.

ಉಪ್ಪಿನಂಗಡಿ ಗಾಂಧೀಪಾರ್ಕ್‌ನಲ್ಲಿ ಈ ಮೊದಲು ಗಾಂಧಿ ಪ್ರತಿಮೆಯನ್ನು ಚತುಷ್ಪಥ ಹೆದ್ದಾರಿ ನೆಪದಲ್ಲಿ ತೆರವು ಮಾಡಲಾಗಿದ್ದು, ಅದನ್ನು ಅಲ್ಲಿ ಮರುಸ್ಥಾಪಿಸಬೇಕು. ಅಲ್ಲಿಂದ ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿಯ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮಹಾತ್ಮಗಾಂಧಿ ರಸ್ತೆ ಎಂದು ನಾಮಕರಣ ಮಾಡಬೇಕೆಂಬ ಆಗ್ರಹ, 4ನೇ ವಾರ್ಡಿನ ಪರಿಶಿಷ್ಟ ಜಾತಿ ಕಾಲನಿಗೆ ಹೋಗುವ ರಸ್ತೆಯ ವಿವಿಧ ಕಡೆ ಚರಂಡಿಯ ಕೆಲಸ ಆಗದೆ ಬಿಲ್ ಪಾವತಿಯ ಬಗ್ಗೆ ಆಕ್ಷೇಪ ವ್ಯಕ್ತವಾಯಿತು.

ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಮುಹಮ್ಮದ್ ತೌಸೀಫ್ ಯು.ಟಿ, ವಿನಾಯಕ ಪೈ, ಉಷಾಚಂದ್ರ ಮುಳಿಯ, ಉಷಾ ನಾಯ್ಕ, ಲೋಕೇಶ್ ಪೂಜಾರಿ, ಧನಂಜಯ ಕುಮಾರ್, ಯು.ಕೆ.ಇಬ್ರಾಹಿಂ, ಮೈಸಿದ್ ಇಬ್ರಾಹಿಂ, ಶೋಭಾ, ಸುರೇಶ್ ಅತ್ರೆಮಜಲು, ವನಿತಾ, ಕೆ.ಅಬ್ದುಲ್ ರಹಿಮಾನ್, ಅಬ್ದುಲ್ ರಶೀದ್, ನೆಬಿಸ ಬಿ, ಸೌಧ ಉಪಸ್ಥಿತರಿದ್ದರು.

ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಚರ್ಚಾ ನಿಯಂತ್ರಣಾಧಿಕಾರಿಯಾಗಿ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಇದ್ದರು. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರಾಡ್ರಿಗಸ್ ವರದಿ ಮಂಡಿಸಿದರು. ಕಾರ್ಯದರ್ಶಿ ಗೀತಾ ಶೇಖರ್ ಸ್ವಾಗತಿಸಿ, ವಂದಿಸಿದರು.

ಸರ್ಕಾರಿ ಶಾಲೆಯಿಂದ ನೀರು ಶುಲ್ಕ ವಸೂಲಿ

ರಾಮನಗರದ ಟ್ಯಾಂಕ್ ಬಳಿ ನಿರ್ಮಿಸಲಾದ ಕಟ್ಟಡದ ಕಾಮಗಾರಿ ಪೂರ್ಣವಾಗದಿದ್ದರೂ ಕೂಡ ಬಿಲ್ ಪಾವತಿಸಲಾಗಿದೆ ಎಂದು ಆಕ್ಷೇಪ ವ್ಯಕ್ತವಾಯಿತು. ಸರ್ಕಾರಿ ಶಾಲೆಗಳಿಗೆ ಉಚಿತ ನೀರು ಸೌಲಭ್ಯ ಕಲ್ಪಿಸಿರುವಾಗ ಪುಳಿತ್ತಡಿಯ ಸರ್ಕಾರಿ ಶಾಲೆಗೆ ಕುಡಿಯುವ ನೀರಿನ ಸಂಪರ್ಕಕ್ಕೆ ಶುಲ್ಕ ಸ್ವೀಕರಿಸಿ ತಾರತಮ್ಯ ಎಸಗಲಾಗಿದೆ. ಗಾಂಧಿಪಾರ್ಕ್‌ನಲ್ಲಿ ನೂತನವಾಗಿ ನಿರ್ಮಾಣವಾದ ವಾಣಿಜ್ಯ ಸಂಕೀರ್ಣ ಹಾಗೂ ತಮ್ಮ ಮನೆಯ ಎದುರು ಪಂಚಾಯಿತಿ ಸ್ವಾಧೀನದ ಚರಂಡಿಯನ್ನು ಪ್ರಭಾವಿಯೋರ್ವರು ದುರಸ್ತಿ ಮಾಡಿದ ಬಗ್ಗೆ ಗ್ರಾಮಸ್ಥರೊಬ್ಬರು ಅಪರಾಧವೆಂಬಂತೆ ಆರೋಪಿಸಿದಾಗ, ಪಂಚಾಯಿತಿ ಆಡಳಿತದ ವಿನಂತಿ ಮೇರೆಗೆ ಚರಂಡಿ ಕಾಮಗಾರಿ ನಡೆಸಿದ್ದು ಎಂಬ ಮಾಹಿತಿ ಪಂಚಾಯಿತಿ ಆಡಳಿತದಿಂದ ವ್ಯಕ್ತವಾಯಿತು.

ಮೊದಲಿನಂತಯೇ ಇರಲಿ 9/11

ಗ್ರಾ.ಪಂ ರಸ್ತೆಯ ಮಾರ್ಜಿನ್‌ಗಳು ಹೆಚ್ಚಿನ ಕಡೆ ಒತ್ತುವರಿಯಾಗಿ ಸುಗಮ ಸಂಚಾರಕ್ಕೆ ಅಡೆತಡೆಯಾಗುತ್ತಿದೆ. ಸರ್ಕಾರದ ಹೊಸ ನೀತಿಯಂತೆ 9/11 ಮಾಡಲು ತುಂಬಾ ಸಮಸ್ಯೆಗಳು ಎದುರಾಗುತ್ತಿವೆ. ಆದ್ದರಿಂದ ಮೊದಲಿನ ರೀತಿಯಲ್ಲಿಯೇ 9/11 ಆಗಬೇಕೆಂಬ ಬೇಡಿಕೆ ಪ್ರಸ್ತಾಪಿಸಲ್ಪಟ್ಟಿತು.