ಜಿಲ್ಲೆ

ಅಪ್ಪರ್ ಭದ್ರೆಗೆ ಸಿಗಲಿದೆ ಇನ್ನೂ ಹೆಚ್ಚು ಅನುದಾನ

ಚಿತ್ರದುರ್ಗ: ಕೇಂದ್ರದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿರುವ 5300 ಕೋಟಿ ರೂ. ಗಳೊಂದಿಗೆ ಇನ್ನೂ ಹೆಚ್ಚಿನ ಅನುದಾನ ಸಿಗಲಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ, ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ರಾಜ್ಯಕ್ಕೂ ಕೊಡದ ಅನುದಾನವನ್ನು ಕೇಂದ್ರ ಸರ್ಕಾರ ನಮಗೆ ಕೊಟ್ಟಿದೆ. ಜಿಲ್ಲೆಯ ಪ್ರತಿ ಇಂಚು ಕೃಷಿ ಭೂಮಿಗೂ ಹನಿ ನೀರಾವರಿ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದ ಮೇಲೆಯೇ, ಭದ್ರೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಪರಿಗಣಿಸಲು ಸಿಡಬ್ಲುೃಸಿ ಒಪ್ಪಿಗೆ ಸೂಚಿಸಿದೆ ಎಂದರು.

ರಾಷ್ಟ್ರೀಯ ಯೋಜನೆ ಎಂಬ ಪದ ಬಳಕೆ ಆಗಿಲ್ಲ. ಆದರೆ, ಬಜೆಟ್‌ನಲ್ಲಿ ಅನುದಾನ ಘೋಷಿಸಿರುವುದರಿಂದ ಇದು ರಾಷ್ಟ್ರೀಯ ಯೋಜನೆಯೇ ಎಂದು ಪ್ರತಿಪಾದಿಸಿದ ಸಚಿವರು, ಈ ಮುನ್ನ ಸಲ್ಲಿಕೆಯಾದ ಡಿಪಿಆರ್ ಪರಿಶೀಲಿಸಿ, ಅವಶ್ಯಕತೆ ಬಿದ್ದರೆ ಅಗತ್ಯಕ್ಕೆ ಅನುಗುಣವಾಗಿ ಇನ್ನೂ ಹೆಚ್ಚಿನ ಅನುದಾನವನ್ನು ಕೇಂದ್ರದಿಂದ ಪಡೆಯಬಹುದು ಎಂದು ಹೇಳಿದರು.

ರಾಷ್ಟ್ರೀಯ ಯೋಜನೆ ಎಂದು ಘೋಷಿಸುವ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ, ನೀರಾವರಿ ಸಚಿವ ಗೋವಿಂದ ಕಾರಜೋಳ ಎಲ್ಲರೂ ಪ್ರಧಾನಿ ಹಾಗೂ ಕೇಂದ್ರ ಜಲ ಸಂಪನ್ಮೂಲ ಸಚಿವರೊಂದಿಗೆ ಚರ್ಚಿಸುತ್ತೇವೆ ಎಂದರು.

ಯೋಜನೆ ಅನುಷ್ಠಾನಕ್ಕಾಗಿ ಹೋರಾಡಿದ ಜಿಲ್ಲೆಯ ರೈತರು, ನೀರಾವರಿ ಹೋರಾಟ ಸಮಿತಿ, ವಿವಿಧ ಸಂಘಟನೆಗಳ ಪ್ರಮುಖರು, ಮಠಾಧೀಶರು, ಮಾಧ್ಯಮದವರು, ಸಿಎಂ, ನೀರಾವರಿ ಮಂತ್ರಿ, ಈ ಭಾಗದ ಶಾಸಕರು ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಕೇಂದ್ರದಿಂದ ಅನುದಾನ ತರುವುದಾಗಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ನಾಯಕರು ಒಮ್ಮೆಯೂ ಹೇಳಲಿಲ್ಲವೆಂದು ವಾಗ್ದಾಳಿ ನಡೆಸಿದ ಸಚಿವರು, ಚಿತ್ರದುರ್ಗದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಮದಕರಿ ನಾಯಕ ಥೀಮ್‌ಪಾರ್ಕ್ ನಿರ್ಮಾಣಕ್ಕೂ ಪ್ರಯತ್ನ ನಡೆದಿದೆ ಎಂದರು.

ತುಮಕೂರು-ದಾವಣಗೆರೆ ನೇರ ರೈಲು ಮಾರ್ಗಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದೇ ಶೈಕ್ಷಣಿಕ ವರ್ಷದಿಂದ ಕೇಂದ್ರೀಯ ವಿದ್ಯಾಲಯ ಪ್ರಾರಂಭವಾಗುವುದು ಶೇ. ನೂರು ಖಚಿತ. ಪರಿಶಿಷ್ಟ ಪಂಗಡಕ್ಕೆ 740 ಏಕಲವ್ಯ ಶಾಲೆಗಳನ್ನೂ ಘೋಷಿಸಲಾಗಿದೆ. ಈ ಶಾಲೆಗಳು ನಮ್ಮ ಜಿಲ್ಲೆಯಲ್ಲೂ ಪ್ರಾರಂಭವಾಗಲಿವೆ ಎಂದು ಹೇಳಿದರು.

ಸಿರಿಧಾನ್ಯ ಬೆಳೆಗಾರರಿಗೆ, ನರ್ಸಿಂಗ್ ಕಾಲೇಜು, ಸ್ಕಿಲ್ ಟ್ರೈನಿಂಗ್ ಸೆಂಟರ್, ವಿಮಾನ ನಿಲ್ದಾಣಗಳು, ಗ್ರೀನ್ ಎನರ್ಜಿ, ಶಿಕ್ಷಕರಿಗೆ ತರಬೇತಿ, ನಗರ ಸ್ಥಳೀಯ ಸಂಸ್ಥೆಗಳಿಗೆ ಮುನ್ಸಿಪಲ್ ಬಾಂಡ್ ಇತ್ಯಾದಿ, ಕೃಷಿ, ಶಿಕ್ಷಣ, ಯುವ ಶಕ್ತಿಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡರಾದ ಮೋಹನ್, ನಾಗರಾಜ್ ಬೇದ್ರೆ, ಕೃಷ್ಣಮೂರ್ತಿ ಇದ್ದರು.

*13ಕ್ಕೆ ದುರ್ಗಕ್ಕೆ ನಮೋ?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಿತ್ರದುರ್ಗಕ್ಕೆ ಫೆ.13ರಂದು ಭೇಟಿ ನೀಡುವ ಕುರಿತಂತೆ ಪಕ್ಷದ ಪ್ರಮುಖರು ಮಾಹಿತಿ ನೀಡಿದ್ದಾರೆ. ಈ ಕುರಿತು ಸದ್ಯದಲ್ಲೇ ಅಧಿಕೃತವಾಗಿ ತಿಳಿಯಲಿದೆ ಎಂದು ನಾರಾಯಣಸ್ವಾಮಿ ಹೇಳಿದರು.

*ಗುರುತಿಸಿದ ಜಾಗದಲ್ಲಿ ಮೆಡಿಕಲ್ ಕಾಲೇಜು

ನಗರದಲ್ಲಿ ಲಭ್ಯವಿರುವ ಕಟ್ಟಡಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜನ್ನು ಆರಂಭಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ, ಇಂಗಳದಾಳ್ ಬಳಿ ಡಿನೋಟಿಫಿಕೇಷನ್ ಆಗಿರುವ 95.35 ಎಕರೆ ಡೀಮ್ಡ್ ಫಾರೆಸ್ಟ್ ಜಮೀನಲ್ಲಿ ಕಾಲೇಜು ನಿರ್ಮಿಸಬಹುದು ಎಂಬುದು ನನ್ನ ಅಬಿಪ್ರಾಯ. ಆದರೆ, ಈಗಾಗಲೇ ಗುರುತಿಸಿರುವ ಸ್ಥಳದಲ್ಲೇ ಕಾಲೇಜು ನಿರ್ಮಾಣವಾಗಲಿ ಎಂಬ ಶಾಸಕ ತಿಪ್ಪಾರೆಡ್ಡಿ ಹೇಳಿಕೆಗೆ ನನ್ನ ತಕರಾರು ಇಲ್ಲ. ಆದರೆ, ಜಿಲ್ಲೆ ಬೆಳೆಯಬೇಕು ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಸಿಗಬೇಕೆಂಬುದು ನನ್ನ ಅಪೇಕ್ಷೆಯಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.