ಮೈಸೂರು: ಉಪ್ಪಾರ ಸಮುದಾಯದ ಬಾಂಧವರು ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿವೃತ್ತ ನಿರ್ದೇಶಕ ಮತ್ತು ಜಂಟಿ ಕಾರ್ಯದರ್ಶಿ ಪಿ.ಶಂಕರ್ ಹೇಳಿದರು.
ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದಿಂದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ 28ನೇ ವಾರ್ಷಿಕ ಪ್ರತಿಭಾ ಪುರಸ್ಕಾರ, ನಿವೃತ್ತ, ಬಡ್ತಿ ಹೊಂದಿದ ನೌಕರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಕೀಯ ಸ್ಥಾನಮಾನಗಳು ಹೆಚ್ಚಾಗಿ ಲಭಿಸಬೇಕು. ವೈಜ್ಞಾನಿಕ ರಾಜಕೀಯ ಮೀಸಲಾತಿಗೆ ಸರ್ಕಾರದ ಗಮನ ಸೆಳೆಯಬೇಕು. ಈ ಹಿನ್ನೆಲೆಯಲ್ಲಿ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.
ಹುಬ್ಬಳ್ಳಿ ವಾಣಿಜ್ಯ ತೆರಿಗೆ ಉಪ ಆಯುಕ್ತ ಶಂಕರಪ್ಪ ಬೆಳ್ಳುಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಸಾಧನೆ ವಾಡಲು ಗುರಿ ಹಾಕಿಕೊಳ್ಳಬೇಕು. ಕನಸು ನನಸಾಗಿಸಲು ಶ್ರಮಿಸಬೇಕು. ಯಾವುದೇ ಕೀಳರಿಮೆ ಹೊಂದಬಾರದು. ಉತ್ತಮರ ಸಹವಾಸ ಮಾಡಿ ಒಳ್ಳೆಯ ನಡವಳಿಕೆ ಅಳವಡಿಸಿಕೊಳ್ಳಬೇಕು. ಇದರಿಂದ ಸಮಾಜ ನಮ್ಮನ್ನು ಉತ್ತಮ ರೀತಿಯಲ್ಲಿ ನೋಡುತ್ತದೆ. ಹಿರಿಯರಿಗೆ ಗೌರವ ನೀಡಿ ಮಾಗರ್ದರ್ಶನ ಪಡೆಯಬೇಕು ಎಂದು ಸಲಹೆ ನೀಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಭಗೀರಥ ವಿದ್ಯಾಶ್ರಿ, ಸ್ನಾತಕೋತ್ತರ ವೈದ್ಯಕೀಯ ಪ್ರವೇಶಾತಿ ಪಡೆದವರಿಗೆ ಭಗೀರಥ ವೈದ್ಯಶ್ರೀ, ಪಿಎಚ್‌ಡಿ ಪದವೀಧರರಿಗೆ ಭಗೀರಥ ಪ್ರತಿಭಾ ರತ್ನ, ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಭಗೀರಥ ಯೋಗರತ್ನ, ಭಗೀರಥ ಕಲಾರತ್ನ ಭಗೀರಥ ವಿಶಿಷ್ಟ ಕ್ರೀಡಾರತ್ನ, ಭಗೀರಥ ಕೃಷಿರತ್ನ, ಭಗೀರಥ ಸವಾಜಸೇವಾ ರತ್ನ, ಭಗೀರಥ ವಿಶಿಷ್ಟ ಸಮಾಜ ಸೇವಾ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮಳವಳ್ಳಿ ಅಧ್ಯಯನ ಸರಗೂರು ಮಠದ ಶ್ರೀ ಮಹದೇವ ಸ್ವಾಮೀಜಿ, ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಿರೀಶ್ ಉಪ್ಪಾರ್, ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರ ಸಂಘದ ಅಧ್ಯಕ್ಷ ಟಿ.ಆರ್.ಶಿವರಾಜು, ಸಂಘದ ಗೌರವ ಸಲಹೆಗಾರ ಜಗನ್ನಾಥ ಸಾಗರ್, ಗೌರವಾಧ್ಯಕ್ಷ ಅಧ್ಯಕ್ಷ ಜವರಶೆಟ್ಟಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಪ್ಪಾರ ಸಂಘದ ಗೌರವಾಧ್ಯಕ್ಷ ಹನುಮಂತಶೆಟ್ಟಿ, ವಿಷಕಂಠಯ್ಯ ಕಾರ್ಯಾಧ್ಯಕ್ಷ ಗಂಗಯ್ಯ, ಮುಖಂಡರಾದ ಶಿವಕುಮಾರ್, ಲತಾಸಿದ್ಧಶೆಟ್ಟಿ, ಮಹದೇವಶೆಟ್ಟಿ, ಕೃಷ್ಣ, ಜಯಸ್ವಾಮಿ, ಚಿಕ್ಕತಾಂಡವಶೆಟ್ಟಿ, ಜಯಶಂಕರಮೂರ್ತಿ ಹಾಜರಿದ್ದರು.