ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಉನ್ನತೀಕರಿಸಲು, ಅಗತ್ಯ ಸೌಲಭ್ಯ ಒದಗಿಸಲು ಪೂರಕವಾಗುವಂತೆ ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದಲ್ಲಿ ತಾಪಂ ಸಭಾಂಗಣದಲ್ಲಿ ಸಭೆ ನಡೆಯಿತು.
ಬೈಂದೂರು ವಲಯದ 14 ಸರ್ಕಾರಿ ಪ್ರೌಢಶಾಲೆ ಹಾಗೂ 5 ಅನುದಾನಿತ ಶಾಲೆಗಳ ಪ್ರತಿನಿಧಿಗಳು, ಎಸ್‌ಡಿಎಂಸಿ, ಶಾಲಾ ಶಿಕ್ಷಕರು, ಹಳೇ ವಿದ್ಯಾರ್ಥಿ ಸಂಘ ಪರಸ್ಪರ ಸಮನ್ವಯದಿಂದ ಶಾಲೆ ಸರ್ವಾಂಗೀಣ ಶ್ರೇಯೋಭಿವೃದ್ಧಿಗೆ ಒಟ್ಟಾಗಿ ಶ್ರಮಿಸಬೇಕು, ಸಮೃದ್ಧ ಬೈಂದೂರು ಪರಿಕಲ್ಪನೆಯಡಿ 300 ಟ್ರೀಸ್ ಯೋಚನೆ ಬಗ್ಗೆ ಮಾಹಿತಿ ನೀಡಿದ ಶಾಸಕರು, ಇದಕ್ಕೆ ಸಹಕರಿಸುತ್ತಿರುವ ದಾನಿಗಳ ಹಾಗೂ ಸರ್ಕಾರೇತರ ಸಂಸ್ಥೆಗಳ ಬೆಂಬಲದ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು.
ಪ್ರತಿಯೊಂದು ಶಾಲೆಯೂ ತಮ್ಮ ತಮ್ಮ ಹಂತದಲ್ಲಿಯೇ ಹಳೇ ವಿದ್ಯಾರ್ಥಿಗಳ ಸಹಕಾರ ಪಡೆದು ಕಂಪನಿಗಳ ಸಿಎಸ್‌ಆರ್ ಅನುದಾನ ಬಳಸಿಕೊಳ್ಳಲು ಪ್ರಯತ್ನಿಸಬೇಕು. ಊರಿನ ದಾನಿಗಳ ಮೂಲಕ ಅಭಿವೃದ್ಧಿಗೆ ಕೊಡುಗೆ ಪಡೆಯುವಂತೆ ಸಲಹೆ ನೀಡಿದರು.
ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುನ್ನತ ಅಂಕ ಪಡೆಯಲು ಶ್ರಮವಹಿಸಿದ ಶಾಲೆಗಳ ಮುಖ್ಯಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ಬೈಂದೂರು ವಲಯದ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮುಖ್ಯಸ್ಥರು, ಶಾಲಾ ಮುಖ್ಯಶಿಕ್ಷಕರು, ಶಿಕ್ಷಕರು ಮಾಹಿತಿ ನೀಡಿದರು.
ಹಲವು ಶಾಲೆಗಳಲ್ಲಿ ಕಟ್ಟಡಗಳ ಪರಿಸ್ಥಿತಿ ಚಿಂತಾಜನಕವಾಗಿದ್ದು ಈ ಬಗ್ಗೆ ಕೂಡಲೇ ಶಾಲಾಭಿವೃದ್ಧಿ ಸಮಿತಿ ಕ್ರಮವಹಿಸಿ ಇಲಾಖೆ ಮೇಲಿನ ಹಂತಕ್ಕೆ ವರದಿ ಮಾಡಬೇಕು ಮತ್ತು ಅದರ ನಿರಂತರ ಫಾಲೋಅಪ್ ಮಾಡಬೇಕು. ಶಿಥಿಲಾವಸ್ಥೆಯ ಕಟ್ಟಡಗಳಲ್ಲಿ ವಿದ್ಯಾರ್ಥಿಗಳನ್ನು ಕೂರಿಸದೆ ಮಕ್ಕಳ ಸುರಕ್ಷತೆ ಕಡೆಗೆ ಗಮನಹರಿಸಲು ಶಾಸಕರು ಸೂಚಿಸಿದರು.
ಶಾಲಾ ಆಸ್ತಿ ದಾಖಲೆ ಅಸಮರ್ಪಕವಾಗಿ ಇದ್ದಲ್ಲಿ ಸರಿಪಡಿಸಿಕೊಳ್ಳಬೇಕು. ಸ್ಥಳೀಯ ಗ್ರಾಪಂ ಸಹಕಾರ ಪಡೆದು ನರೇಗಾ ಯೋಜನೆಯಡಿ ಶಾಲೆಗಳ ಮೂಲಸೌಕರ್ಯ ಕಾಮಗಾರಿ ಕೈಗೊಳ್ಳಬೇಕು.-ಗುರುರಾಜ್ ಗಂಟಿಹೊಳೆ ಶಾಸಕ