ಜಿಲ್ಲೆ

ನಗರದ 50 ಉದ್ಯಾನವನಗಳ ಉನ್ನತೀಕರಣ; ಬ್ರಾಂಡ್ ಬೆಂಗಳೂರು ಯೋಜನೆಯಡಿ ಕ್ರಮ

ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ 50 ಉದ್ಯಾನವನಗಳ ಉನ್ನತೀಕರಣ ಮಾಡಲಾಗುತ್ತದೆ ಎಂದು ಅರಣ್ಯ, ಪರಿಸರ ಹಾಗೂ ಹವಾಮಾನ ವೈಪರೀತ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹಲೋತ್ ತಿಳಿಸಿದ್ದಾರೆ.

ಬಸವನಗುಡಿಯ ಬ್ಯೂಗಲ್ ರಾಕ್ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ಹಬ್ಬ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ 1,287 ಉದ್ಯಾನವನಗಳಿದ್ದು, ಎಲ್ಲಾ ಉದ್ಯಾನವನಗಳಲ್ಲಿ ಹಸಿರೀಕರಣ, ಫೆನ್ಸಿಂಗ್ ಹಾಕಲಾಗಿದೆ. ಉದ್ಯಾನವನಗಳಲ್ಲಿ ನಾಗರಿಕರಿಗೆ ಕೂರಲು ಆಸನಗಳ ವ್ಯವಸ್ಥೆ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಅಂತರ್ಜಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ನಗರದ ನಾಗರಿಕರು ಉದ್ಯಾನವನಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಬಂದು ಅಧಿಕ ಸಮಯ ಕಳೆಯಬೇಕು, ಪರಿಸರವನ್ನು ಆನಂದಿಸಬೇಕೆಂಬ ಉದ್ದೇಶದಿಂದ ಎಲ್ಲಾ ಉದ್ಯಾನವನಗಳ ಸಮಯವನ್ನು ಬೆಳಿಗ್ಗೆ 5 ರಿಂದ ರಾತ್ರಿ 10 ಗಂಟೆಯವರೆಗೆ ತೆರೆಯಲಾಗಿರುತ್ತದೆ. ಉದ್ಯಾನವನಗಳನ್ನು ಸ್ವಚ್ಛವಾಗಿಡಲು ಸಾರ್ವಜನಿಕರು ಸಹಕರಿಸಬೇಕು ಎಂತು ಪ್ರೀತಿ ಗೆಹಲೋತ್ ಮನವಿ ಮಾಡಿದರು.

ಉದ್ಯಾನವನಕ್ಕೆ ಬರುವ ಸಾರ್ವಜನಿಕರಿಗೆ ಮನರಂಜನೆಗಾಗಿ ಉದ್ಯಾನವನಗಳಲ್ಲಿ ಬೆಂಗಳೂರು ಹಬ್ಬ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ನಮ್ಮ ಪಾರಂಪರಿಕ ಸಂಸ್ಕೃತಿ, ಜಾನಪದ ಕಲೆ, ಸಂಗೀತ ಪ್ರದರ್ಶನ ಇಲ್ಲಿ ನಡೆಯಲಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ್, ತೋಟಗಾರಿಕಾ ಉಪ ನಿರ್ದೇಶಕ ಚಂದ್ರಶೇಖರ್ ಹಾಗೂ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

ವರ್ಷವಿಡೀ ಕಾರ್ಯಕ್ರಮ ಆಯೋಜನೆ

ಬಿಬಿಎಂಪಿ ವ್ಯಾಪ್ತಿಯ 27 ವಿಧಾನಸಭಾ ಕ್ಷೇತ್ರಗಳ 27 ಉದ್ಯಾನವನಗಳಲ್ಲಿ 2026 ಮಾರ್ಚ್ ವರೆಗೆ ವರ್ಷವಿಡೀ ಸಾಂಸ್ಕೃತಿಕ ಮತ್ತು ಮಕ್ಕಳಿಗೆ ಉತ್ತೇಜಿಸುವ ಕಲೆಗಳ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಈ ಬಗ್ಗೆ ನಾಗರೀಕರರಿಗೆ ಅರಿವು ಮೂಡಿಸುವುದಕ್ಕಾಗಿ ಜಾಗೃತಿ ಜಾಥಾ ನಡೆಸಲಾಯಿತು.